ನೇಹಾ ಕೊಲೆ ಪ್ರಕರಣದ ತನಿಖೆ ಸಿಬಿಐಗೆ ವಹಿಸಲು ಮುತಾಲಿಕ ಒತ್ತಾಯ

Pramod Mutalik
Published on

ಹುಬ್ಬಳ್ಳಿ : ನೇಹಾ ಕೊಲೆ ಪ್ರಕರಣದ ವಿಚಾರಣೆಗೆ ಕೂಡಲೇ ವಿಶೇಷ ನ್ಯಾಯಾಲಯ ರಚಿಸಬೇಕು ಇಲ್ಲವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ, ನೇಹಾ ಕೊಲೆ ಪ್ರಕರಣದಲ್ಲಿ ಸರ್ಕಾರ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ದೂರಿದರು.

ಹಿಂದು ಯುವತಿಯರ ಹತ್ಯೆ, ಅತ್ಯಾಚಾರಗಳಿಗೆ ಕಡಿವಾಣ ಇಲ್ಲದಂತಾಗಿದೆ. ನೇಹಾ ಕೊಲೆ ಮಾಡಿರುವ ಫಯಾಜ್​ಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ ಜಿಹಾದಿ ಮನಸ್ಥಿತಿಗಳಿಗೆ ಎಚ್ಚರಿಕೆ ನೀಡಿದಂತಾಗುತ್ತಿತ್ತು ಎಂದರು.

ನೇಹಾ ಹಿರೇಮಠ ಮನೆಗೆ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಮತ್ತಿತರ ಜನಪ್ರತಿನಿಧಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ 120 ದಿನಗಳಲ್ಲಿ ಪ್ರಕರಣದ ಇತ್ಯರ್ಥಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ ಘಟನೆ ನಡೆದು 9 ತಿಂಗಳಾದರೂ ಆರೋಪಿ ಫಯಾಜ್​ನ ವಿಚಾರಣೆ ಪೂರ್ಣಗೊಂಡಿಲ್ಲ. ಕೊಲೆಗಾರ ಮುಸ್ಲಿಂ ಎನ್ನುವ ಕಾರಣಕ್ಕೆ ಇಷ್ಟೊಂದು ತುಷ್ಠೀಕರಣ ಸರಿಯಲ್ಲ. ಆರೋಪಿಗೆ ಗಲ್ಲಿಗೇರಿಸಿ ಕ್ರೌರ್ಯದ ಮಾನಸಿಕತೆಗೆ ಮುಕ್ತಾಯ ಹೇಳಬೇಕು ಎಂದು ಒತ್ತಾಯಿಸಿದರು.

ಇವರಿಗೆ ಕಾನೂನು ಭಯ ಇಲ್ಲದ ಕಾರಣ ರಾಜ್ಯದಲ್ಲಿ 9 ತಿಂಗಳಲ್ಲಿ 42 ಲವ್ ಜಿಹಾದಿ ಪ್ರಕರಣ, 3 ಕೊಲೆ, 5 ಅತ್ಯಾಚಾರ, 3 ಆತ್ಮಹತ್ಯೆ, 8 ಅಪಹರಣ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.

ಹತ್ತು ದಿನಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಬಿವಿಬಿ ಕಾಲೇಜಿನಿಂದ ನ್ಯಾಯಾಲಯದವರೆಗೆ ಮೌನ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನೇಹಾ ಹತ್ಯೆ ಪ್ರಕರಣದ ಹಿಂದೆ ಶಾಸಕರೊಬ್ಬರ ಹಾಗೂ ಪ್ರಭಾವಿಗಳ ಕೈವಾಡ ಇರುವ ಕಾರಣಕ್ಕೆ ಪ್ರಕರಣದ ಬಗ್ಗೆ ಗಂಭೀರ ತನಿಖೆ ನಡೆಸದೇ, ವನ್ನು ಮುಂದೂಡಿಕೊಂಡು ಹೋಗಲಾಗುತ್ತಿದೆ. ಈ ಕುರಿತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಗಳು ಬಂದಿದ್ದು, ವಿಶೇಷ ನ್ಯಾಯಾಲಯ ಅಥವಾ ಸಿಬಿಐಗೆ ವಹಿಸಿದರೆ ಆ ಮಾಹಿತಿಗಳನ್ನು ಅಲ್ಲಿಗೆ ಮುಟ್ಟಿಸಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ ಶಾಸಕರ ಹೆಸರು ಹಾಗೂ ದಾಖಲೆಗಳನ್ನು ಬಹಿರಂಗಪಡಿಸುವುದಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರ ಕುಟುಂಬಸ್ಥರಿಗೆ ಮನವಿ ಮಾಡುತ್ತೇವೆ. ಅಂಜಲಿ ಹತ್ಯೆ ಪ್ರಕರಣದ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದರು ತಿಳಿಸಿದರು.

ನೇಹಾ ಹತ್ಯೆ ವಿಚಾರಣೆ ಪ್ರಕರಣವನ್ನು ಬೇರೆ ಯಾವುದೇ ನ್ಯಾಯಾಲಯಕ್ಕೆ ವರ್ಗಾಯಿಸಬಾರದು. ಕೊಲೆಗಾರಿಗೆ ಜೈಲಿನಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ. ತಕ್ಷಣ ಆತನಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಜೈಲಿನ ಎದುರು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರಕರಣದ ವಕಾಲತ್ತು ವಹಿಸಿರುವ ಮುಸ್ಲಿಂ ವಕೀಲರನ್ನು ಅಂಜುಮನ್ ಇಸ್ಲಾಂ ಸಂಸ್ಥೆ ಹಾಗೂ ಧಾರ್ವಿುಕ ಗುರುಗಳು ಧಾರ್ವಿುಕವಾಗಿ ಬಹಿಷ್ಕಾರ ಹಾಕಬೇಕು. ಒಬ್ಬ ಹಿಂದು ವಕೀಲರೂ ಆರೋಪಿ ಪರವಾಗಿದ್ದು, ಇಬ್ಬರೂ ವಕೀಲರ ಮನೆಗಳ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಏರ್​ಗನ್ ಬಳಸಿ ಯುವಕರಿಗೆ ಸ್ವಯಂ ರಕ್ಷಣೆ ತರಬೇತಿ ನೀಡಿದ್ದಕ್ಕೆ ಬಾಗಲಕೋಟೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಏರ್​ಗನ್ ಬಳಕೆಗೆ ಪರವಾನಿಗೆ ಬೇಕಾಗಿಲ್ಲ ಎಂದು ಹೇಳಿದರು.

ಈ ಕಾಯ್ದೆಗಳ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರಿಗೆ ಮುಂದೇನು ಮಾಡಬೇಕು ಎಂದು ತೋಚದಂತಾಗಿದೆ. ಸರ್ಕಾರದ ಇಂತಹ ಗೊಡ್ಡು ಪ್ರಕರಣಗಳಿಗೆ ಹೆದರುವುದಿಲ್ಲ. ಮುಂದೆಯೂ ಇಂತಹ ತರಬೇತಿಗಳನ್ನು ಮಾಡುತ್ತೇವೆ ಎಂದರು.

ಈಗಾಗಲೇ ಆಯ್ದ ಯುವಕರಿಗೆ ವ್ಯಕ್ತಿತ್ವ ವಿಕಸನ, ಸ್ವಯಂ ರಕ್ಷಣೆ, ರಾಷ್ಟ್ರಭಕ್ತಿ ಸೇರಿದಂತೆ ಹಲವು ವಿಷಯಗಳ ಮೇಲೆ ಶಿಬಿರ ಮಾಡಲಾಗುತ್ತಿದೆ ಎಂದು ಹೇಳಿದರು.

ಶ್ರೀರಾಮ ಸೇನಾದ ಮಂಜು ಕಾಟಕರ, ಅಣ್ಣಪಪ್ಪ ದಿವಟಗಿ, ಬಸು ದುರ್ಗದ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net