ಮಂಡ್ಯ ಪ್ರವೇಶಿಸದಂತೆ ಮುತಾಲಿಕ್‌ಗೆ ತಡೆ

21M.D.R.1
Published on

ಮದ್ದೂರು : ನಾಗಮಂಗಲ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಹಿಂದುಗಳನ್ನು ನೋಡಲು ಆಗಮಿಸುತ್ತಿದ್ದ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಗಡಿಭಾಗ ನಿಡಘಟ್ಟದಲ್ಲಿ ಶನಿವಾರ ಪೊಲೀಸರು ಪ್ರವೇಶಕ್ಕೆ ತಡೆ ಹಾಕಿದರು.


ಮಂಡ್ಯದ ಕಾರಾಗೃಹಲ್ಲಿರುವ ನಾಗಮಂಗಲ ತಾಲೂಕಿನ ಬದ್ರಿಕೊಪ್ಪಲು ಗ್ರಾಮದ ಹಿಂದು ಯುವಕರನ್ನು ಭೇಟಿಯಾಗಿ ಮಾತನಾಡಿಸಲು ಬರುತ್ತಿದ್ದ ವೇಳೆಯಲ್ಲಿ ಗಡಿಭಾಗದಲ್ಲಿ ನಿರ್ಬಂಧಿಸಿದರು.


ಮುತಾಲಿಕ್ ಆಗಮನಕ್ಕೂ ಮುನ್ನವೇ ನಾಗಮಂಗಲ ಗಲಬೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶ ನಿಬರ್ಂಧಿಸಿ ಆದೇಶ ಹೊರಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.


ಪೊಲೀಸರು ಬೆಳಗ್ಗೆಯಿಂದಲೂ ವಾಹನಗಳನ್ನ ತಪಾಸಣೆ ಮಾಡುತ್ತಿದ್ದರು. ಮುತಾಲಿಕ್ ಅವರು ಗಡಿಗೆ ಆಗಮಿಸುತ್ತಿದ್ದಂತೆ ಎಚ್ಚರಗೊಂಡ ಪೊಲೀಸರು, ಮುತಾಲಿಕ್ ಅವರು ಜಿಲ್ಲೆಗೆ ಬಾರದಂತೆ ಆದೇಶ ಹೊರಡಿಸಿದ್ದ ಪತ್ರವನ್ನು ತೋರಿಸಿ ವಾಪಾಸ್ ತೆರಳಲು ಸೂಚನೆ ನೀಡಿದರು. ಈ ವೇಳೆ ಮುತಾಲಿಕ್ ಟೀ ಕುಡಿಯಲು ಹೋಟೆಲ್‌ಗೆ ತೆರಳಲು ಕೂಡ ಪೊಲೀಸರು ಅವಕಾಶ ನೀಡಲಿಲ್ಲ.


ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ಆದರೆ, ಪೊಲೀಸರು ನನ್ನನ್ನು ತಡೆಯುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದರು.


ನಾನು ಮಂಡ್ಯಕ್ಕೆ ಭೇಟಿ ನೀಡಿದ ಬಳಿಕ ಏನಾದರೂ ಆದರೆ ನನ್ನ ಮೇಲೆ ಕೇಸ್ ಹಾಕಲಿ. ಅದನ್ನು ಬಿಟ್ಟು ನನ್ನನ್ನು ಸುಮ್ಮನೆ ತಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ನಾನು ಯಾವುದೇ ಸಭೆ ಮಾಡುತ್ತಿರಲಿಲ್ಲ. ಬಂಧಿತ ಹಿಂದು ಯುವಕರನ್ನು ಮಾತಾಡಿಸಲು ಹೋಗುತ್ತಿದ್ದೆ. ನಮ್ಮನ್ನು ತಡೆದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಆಕ್ರೋಶ ವ್ಯಕ್ತಪಡಿಸಿದರು.


ಈ ಮೂಲಕ ಪೊಲೀಸರು ನಮ್ಮ ಸಂಘಟನೆ ಹಾಗೂ ನಮ್ಮ ವೈಚಾರಿಕತೆಯನ್ನು ತಡೆಯುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ನಿರಂತರವಾಗಿ ಹಿಂದುಗಳ ಮೇಲೆ ದೌರ್ಜನ್ಯವಾಗುತ್ತಿದೆ. ಇದಕ್ಕೆ ನಾಗಮಂಗಲ ಹಾಗೂ ದಾವಣಗೆರೆ ಘಟನೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.


ಇವತ್ತು ಪ್ಯಾಲಿಸ್ಟೈನ್ ಧ್ವಜ ಹಾರಿಸುತ್ತಾರೆ, ನಾಳೆ ಪಾಕಿಸ್ತಾನದ ಧ್ವಜ ಹಾರಿಸುತ್ತಾರೆ. ಇಂತವರನ್ನು ಶೂಟ್ ಮಾಡಬೇಕು. ಈದ್ ಮೀಲಾದ್ ವೇಳೆ ಆ ಬಾವುಟ ಯಾಕೆ ಹಾರಿಸಬೇಕು. ಇದು ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿರೋದು. ಕಾಂಗ್ರೆಸ್ ದೇಶ ದ್ರೋಹಿಗಳಿಗೆ ಸಪೋರ್ಟ್ ಮಾಡೋದನ್ನು ಹಿಂದುಗಳು ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿಗೆ ತೆರಳಲು ಅವಕಾಶ :
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಮೂಲಕ ಮೈಸೂರಿಗೆ ತೆರಳುತ್ತೇನೆ. ಅವಕಾಶ ಮಾಡಿಕೊಂಡು ಎಂದು ದೂರವಾಣಿ ಮೂಲಕ ಮುತಾಲಿಕ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರಲ್ಲ ಮನವಿ ಮಾಡಿದರು. ಮುತಾಲಿಕ್ ಮನವಿಯಂತೆ ಪೊಲೀಸ್ ಬಂದೋಬಸ್ತ್ ನಲ್ಲಿ ಮೈಸೂರಿಗೆ ತೆರಳಲು ಪೊಲೀಸರು ಅವಕಾಶ ಕೊಟ್ಟರು.

ಅ.5ರ ವರೆಗೂ ಆದೇಶ :
ನಾಗಮಂಗಲ ಕೋಮುಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಗೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ಸೆ.21ರಿಂದ ಅ.5ವರೆಗೆ ಮಂಡ್ಯ, ಪಾಂಡವಪುರ ಉಪವಿಭಾಗಾಧಿಕಾರಿಗಳಿಂದ ಪ್ರತ್ಯೇಕವಾಗಿ ಆದೇಶವಾಗಿ ಆದೇಶ ಹೊರಡಿಸಿ ನಿಬರ್ಂಧ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net