

ತುಮಕೂರು : ಕರೊನಾ ವೈರಸ್ ರೂಪಾಂತರ ಜಿಲ್ಲಾಡಳಿತವನ್ನು ಬೆಚ್ಚಿಬೀಳಿಸಿದೆ. ಬ್ರಿಟನ್‌ನಿಂದ ಜಿಲ್ಲೆಗೆ ಸೋಮವಾರ ರಾತ್ರಿ ಬಂದಿಳಿದ ಐವರನ್ನು ಪತ್ತೆಹಚ್ಚಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಿದ ಬಳಿಕ ಜಿಲ್ಲಾ ಆರೋಗ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.
ಕರೊನಾ ಆರ್ಭಟ ತಣ್ಣಗಾಗುವ ಹೊತ್ತಿನಲ್ಲಿ ಬ್ರಿಟನ್‌ನಲ್ಲಿ ರೂಪಾಂತರಿ ಕರೊನಾ ಅವಾಂತರ ಸೃಷ್ಟಿಸಿರುವುದು ಸಹಜವಾಗಿ ಮತ್ತೆ ಆತಂಕ ಮೂಡಿಸಿದೆ. ಇಂಗ್ಲೆಂಡ್, ಡೆನ್ಮಾರ್ಕ್, ನೆದರ್ಲೆಂಡ್ ಸೇರಿ ಐರೋಪ್ಯ ರಾಷ್ಟ್ರಗಳಲ್ಲಿ ಕರೊನಾ ವೈರಾಣು ಹೊಸ ರೂಪದಲ್ಲಿ ಅವತರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ವಿದೇಶಗಳಿಂದ ಬಂದವರ ಪತ್ತೆಗೆ ಕ್ರಮವಹಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲೆಗೆ ಬಂದವರನ್ನು ಪತ್ತೆಹಚ್ಚಲು ಜಿಲ್ಲಾಡಳಿತ ಮಂಗಳವಾರ ಇಡೀ ದಿನ ತೊಡಗಿತ್ತು.
ತುಮಕೂರು, ತಿಪಟೂರಲ್ಲಿ ಪತ್ತೆ: ಬ್ರಿಟನ್‌ನಿಂದ ಬಂದವರು ತುಮಕೂರು, ತಿಪಟೂರಲ್ಲಿ ಪತ್ತೆಯಾಗಿದ್ದಾರೆ. ನಗರದ ಮರಳೂರುದಿಣ್ಣೆಯ ನಾಲ್ವರು ಹಾಗೂ ತಿಪಟೂರಿನ ಒಬ್ಬರು ಸೋಮವಾರ ಸಂಜೆ ಜಿಲ್ಲೆ ತಲುಪಿದ್ದಾರೆ. ಐವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಿ ನಿಗಾವಹಿಸಿದೆ.
ಈಗಾಗಲೇ ಬ್ರಿಟನ್‌ನಿಂದ ಬಂದಿರುವ ಐವರ ಗಂಟಲುದ್ರವದ ಮಾದರಿ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ವರದಿ ಬಂದಿಲ್ಲ. ಪಾಸಿಟಿವ್ ಬರಲಿ ನೆಗೆಟಿವ್ ಬರಲಿ ವಿದೇಶದಿಂದ ಬಂದವರನ್ನು 14 ದಿನ ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ವಿದೇಶದಿಂದ ಬಂದವರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ವಿಜಯವಾಣಿಗೆ ಮಾಹಿತಿ ನೀಡಿದರು.
ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲು ಕ್ರಮ ! : ಬ್ರಿಟನ್‌ನಿಂದ ಬಂದಿರುವ ಐವರನ್ನು ಪತ್ತೆಹಚ್ಚಲಾಗಿದೆ. ಅವರ ಪ್ರಯಾಣದ ವಿವರವನ್ನು ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಕಲೆಹಾಕುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಈ ಐವರ ಟ್ರಾವೆಲ್ ಹಿಸ್ಟರಿಯ ಮಾಹಿತಿ ಪಡೆಯಲು ಕ್ರಮವಹಿಸಲಾಗಿದೆ.
ಮಂಗಳವಾರ 37 ಮಂದಿಗೆ ಕರೊನಾ: ಜಿಲ್ಲೆಯಲ್ಲಿ ಮಂಗಳವಾರ 37 ಜನರಿಗೆ ಕರೊನಾ ಸೋಂಕು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 22965ಕ್ಕೇರಿದೆ. ಆಸ್ಪತ್ರೆಯಿಂದ 24 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 22187 ಜನರು ಸೋಂಕುಮುಕ್ತರಾಗಿದ್ದಾರೆ. 368 ಸಕ್ರಿಯ ಪ್ರಕರಣಗಳಿವೆ.ಶಿರಾದಲ್ಲಿ ಒಂದೂ ಪ್ರಕರಣ ಕಂಡುಬಂದಿಲ್ಲ. ಚಿಕ್ಕನಾಯಕನಹಳ್ಳಿ-1 ಗುಬ್ಬಿ-2, ಕುಣಿಗಲ್-12, ಕೊರಟಗೆರೆ -3, ಮಧುಗಿರಿ 2, ಪಾವಗಡ 3, ತಿಪಟೂರು 1, ತುಮಕೂರು 10 ಹಾಗೂ ತುರುವೇಕೆರೆ ತಾಲೂಕಿನಲ್ಲಿ 3 ಒಟ್ಟು 37 ಜನರಿಗೆ ಕರೊನಾ ತಗುಲಿದೆ.
ಕರೊನಾ ವೈರಸ್ ರೂಪಾಂತರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸರ್ಕಾರದ ಸೂಚನೆಯಂತೆ ಬ್ರಿಟನ್‌ನಿಂದ ಬಂದವರ ಮಾಹಿತಿ ಪಡೆದು ಅವರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವರ ಕುಟುಂಬದವರ ಚಲನವಲನದ ಮೇಲೂ ನಿಗಾವಹಿಸಲಾಗಿದೆ. ಡಾ.ನಾಗೇಂದ್ರಪ್ಪ, ಡಿಎಚ್‌ಒ