ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುತಾಲಿಕ ಮನವಿ

28-SVR-3
Published on

ಸವಣೂರ: ತಾಲೂಕಿನ ಕಾರಡಗಿ ಗ್ರಾಮದಲ್ಲಿನ ಸರ್ಕಾರಿ ನಿವೇಶನವನ್ನು ಜುಮ್ಮಾ ಮಸೀದಿ ಹೆಸರಲ್ಲಿ ನೋಂದಣಿಗೊಳಿಸಿ ತಡೆಗೋಡೆ ನಿರ್ಮಿಸಲು ಸಹಕರಿಸಿದ ಪಿಡಿಒ ಹಾಗೂ ಭೂ ಮಾಪನ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಅವರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಹಾಗೂ ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಕಾರಡಗಿ ಗ್ರಾಮದ ಆಸ್ತಿ ನಂ.397ರಲ್ಲಿ ಜುಮ್ಮಾ ಮಸೀದಿಗೆ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಬೇಕು. ಗ್ರಾಮದ ಕೆರೆ ಒತ್ತುವರಿ ತೆರವುಗೊಳಿಸಲು 7ದಿನ ಗಡುವು ನೀಡಲಾಗಿತ್ತು. ನಿರ್ಲಕ್ಷಿಸಿರುವ ಭೂ ಮಾಪಕ ಮಹ್ಮದಕಬೀರ ಮನಿಯಾರ ಹಾಗೂ ಪಿಡಿಒ ಶಂಕರ ಭೋವಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮೋದ ಮುತಾಲಿಕ ಮಾತನಾಡಿ, ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ನಾಲ್ಕು ತಿಂಗಳ ಸಮಯಾವಕಾಶ ಕೇಳಿದ್ದಾರೆ ಎಂದರು.

ಶ್ರೀರಾಮ ಸೇನೆಯ ಗದಿಗೆಪ್ಪ ಕುರವತ್ತಿ, ಪರಪ್ಪ ಅರಳಿಕಟ್ಟಿ, ನಾಗರಾಜ ಅರಳಿಕಟ್ಟಿ, ಸೋಮು ಲಮಾಣಿ, ಮಂಜುನಾಥ ಕಾಟೇಕರ, ಪ್ರಾಣೇಶ ವ್ಯಾಪಾರಿ, ಅಶೋಕ ಬಳಿಗಾರ, ಫಕೀರೇಶ ಕಾಳೆ, ಅಭಿಷೇಕ ಅಕ್ಕಿ, ಮಹೇಶ ಮುದಗಲ್, ಪ್ರವೀಣ ಬಾಲೇಹೊಸೂರ, ವಿನಾಯಕ ವಾಲಿಶೆಟ್ಟಿ, ಚರಣ ಹಣಗಿ ಹಾಗೂ ಇತರರು ಇದ್ದರು.

ಸಹಿಸಲಾಗದು, ಹೋರಾಟ ಅನಿವಾರ್ಯ

ಜಿಲ್ಲೆಯಲ್ಲಿ ಗ್ಯಾಂಗ್‌ರೇಪ್ ಆರೋಪಿಗಳು ಜಾಮೀನನ ಮೇಲೆ ಹೊರ ಬಂದು ವಿಜಯೋತ್ಸವ ಆಚರಿಸುತ್ತಾರೆ. ಸವಣೂರಿನಲ್ಲಿ ಜಂಗಮರ ಖಾನಾವಳಿಯಲ್ಲಿ ಊಟ ಮಾಡಿದ ನಂತರ ಹಣ ಕೇಳಿದರೆ ಹಲ್ಲೆ ನಡೆಸುತ್ತಾರೆ ಎಂದರೆ ಹೇಗೆ ಸಹಿಸಿಕೊಳ್ಳುವುದು ಎಂದು ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ಕನವಳ್ಳಿಮಠ ಕುಟುಂಬಸ್ಥರ ಮನೆಗೆ ಬುಧವಾರ ಭೇಟಿ ನೀಡಿ ಸಾಂತ್ವನ ಹೇಳಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಸ್ಥಳೀಯ ಶಾಸಕನ ಕುಮ್ಮಕ್ಕಿನಿಂದ ಸ್ಥಳೀಯ ಹಿಂದುಗಳಿಗೆ ಮನಶಾಂತಿ ಇಲ್ಲದಂತಾಗಿದೆ. ಕುಟುಂಬ ನಿರ್ವಹಣೆಗೆ ಸಣ್ಣ ಖಾನಾವಳಿ ಮಾಡಿಕೊಂಡು ಉಪ ಜೀವನ ಕೈಗೊಳ್ಳುತ್ತಿರುವ ಕುಟುಂಬಸ್ಥರ ಮೇಲೆ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲು ಪರದಾಡುವಂತಹ ಸ್ಥಿತಿ ಸವಣೂರಿನಲ್ಲಿ ನಿರ್ಮಿಸಿರುವುದು ಯಾರು?. ಇದು ಇನ್ನು ಮುಂದೆ ನಡೆಯುವುದಿಲ್ಲ. ಕೂಡಲೇ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಮಾರಣಾಂತಿಕ ಹಲ್ಲೆ

ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿರುವ ಸಂಗಮೇಶ್ವರ ಖಾನಾವಳಿಯಲ್ಲಿ ಮಂಗಳವಾರ ರಾತ್ರಿ ಊಟ ಮಾಡಿದ ಅಶ್ಪಾಕ, ಅಲ್ಲಾವುದೀನ್ ಹಾಗೂ ಪರಾಜ್ ಎಂಬುವವರು ಬಿಲ್ ಪಾವತಿಗೆ ಸಂಬಂಧಿಸಿ ಖಾನಾವಳಿ ಮಾಲೀಕ ಮತ್ಯುಂಜಯ ಕನವಳ್ಳಿಮಠ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕುಟುಂಬದ ಇಬ್ಬರು ಮಹಿಳೆಯರು ಸೇರಿದಂತೆ 6ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದವರನ್ನು ಬಂಧಿಸಿ ವಿಚಾರಣೆಗೆ ಒಳ ಪಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net