

ಹುಬ್ಬಳ್ಳಿ : ಚಿಕ್ಕೋಡಿಯ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿದ ಆರೋಪಿಗಳ ಮನೆ ಮೇಲೆ ಬುಲೊ್ಡೕಜರ್ ಹತ್ತಿಸಿ ಉತ್ತರ ಪ್ರದೇಶ ಮಾದರಿಯ ಶಿಕ್ಷೆ ನೀಡಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜರನ್ನು ಮಂಗಳವಾರ ಭೇಟಿ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಮೋದ ಮುತಾಲಿಕ, ಆರೋಪಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಿಂದುಗಳ ಹತ್ಯೆಗಳ ಪ್ರಕರಣದ ತನಿಖೆಯ ಸ್ಥಿತಿ ಎಲ್ಲಿಗೆ ಬಂದಿದೆ ? ಇದುವರೆಗೆ ಒಂದು ಪ್ರಕರಣದಲ್ಲಿಯೂ ನ್ಯಾಯ ದೊರಕಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂದರ ಹಿಂದು ವಿರೋಧಿ ವಾತಾವರಣ ಸೃಷ್ಟಿಯಾಗಿರುವುದರಲ್ಲಿ ಸತ್ಯಾಂಶ ಇದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿಯೂ ಪರಿಸ್ಥಿತಿ ಬದಲಾಗಿರಲಿಲ್ಲ. ಹಿಂದಿನ ಸರ್ಕಾರದ ಸಮಯದಲ್ಲಿಯೂ ಗೋ ಹತ್ಯೆ, ಹಿಂದು ಕಾರ್ಯಕರ್ತರ ಕೊಲೆಗಳು ನಡೆದಿವೆ ಎಂದು ದೂರಿದರು.
ಬಿಜೆಪಿ ನಾಯಕರಿಗೆ ಇಂತಹ ಪ್ರಕರಣಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಆ ಪಕ್ಷದ ನಾಯಕರು ಹಿಂದು ಕಾರ್ಯಕರ್ತರೊಂದಿಗೆ ನಿಂತಿದ್ದರೆ ಅವರು ಚುನಾವಣೆಯಲ್ಲಿ ಸೋಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂತಹ ಪ್ರಕರಣಗಳಿಗೆ ರಾಜಕೀಯ ಬಣ್ಣ ಬಳಿಯುವುದನ್ನು ರಾಜಕಾರಣಿಗಳು ಬಿಡಬೇಕು. ಮೂರೂ ರಾಜಕೀಯ ಪಕ್ಷಗಳು ಬಾಯಿ ಮುಚ್ಚಿಕೊಂಡು ತನಿಖೆಗೆ ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.
ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆಯನ್ನು ನಿಭಾಯಿಸಲು ಕರ್ನಾಟಕದ ಪೊಲೀಸರು ಸಮರ್ಥರಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಕೇವಲ ನಾಲ್ಕು ತಾಸುಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಜೈನ ಮುನಿಗಳು ಆಶ್ರಮದಲ್ಲಿ ಒಬ್ಬರೇ ಇರುತ್ತಿದ್ದರು. ಅವರು ಏಕಾಂಗಿಯಾಗಿರುವುದನ್ನು ಗಮನಿಸಿಯೇ ಆರೋಪಿಗಳು ಹತ್ಯೆ ಮಾಡಿದ್ದಾರೆ. ಕೊಲೆಗಾರರು ತಾಲಿಬಾನ್ ಮನಸ್ಥಿತಿ ಹೊಂದಿದ್ದಾರೆ. ತನಿಖೆಯಲ್ಲಿ ಮುಚ್ಚುಮರೆ ಮಾಡಿದರೆ ದೇಶಕ್ಕೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದರು.
ಹಣದ ಕಾರಣದಿಂದ ಈ ಕೊಲೆ ನಡೆದಿರುವ ಸಾಧ್ಯತೆ ಇಲ್ಲ. ಇದೊಂದು ಷಡ್ಯಂತ್ರ. ಕಾಂಗ್ರೆಸ್ ಮುಸ್ಲಿಂರ ಪರವಾಗಿಯೇ ಇರೋದು. ಹಿಂದುಗಳನ್ನು ತುಳಿಯುವುದೇ ಕಾಂಗ್ರೆಸ್ ಕೆಲಸನಾ ? ಈ ಹತ್ಯೆ ಕರ್ನಾಟಕಕ್ಕೇ ಕಳಂಕ. ಆರೋಪಿಗಳಿಗೆ ಜಾಮೀನು ಸಿಗಬಾರದು. ವಕೀಲರು ಆರೋಪಿಗಳ ಪರವಾಗಿ ವಾದ ಮಾಡಬಾರದೆಂದು ವಕೀಲರ ಸಂಘಕ್ಕೆ ಮನವಿ ಮಾಡುವುದಾಗಿ ಹೇಳಿದರು.
ಶ್ರೀರಾಮ ಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಅಪ್ಪಣ್ಣ ದಿವಟಗಿ, ಮಂಜು ಕಾಟ್ಕರ, ಬಸು ದುರ್ಗದ ಮತ್ತಿತರರು ಹಾಜರಿದ್ದರು.