ಕಾಂಗ್ರೆಸ್ ಕುಮ್ಮಕ್ಕಿನಿಂದ ಗೂಂಡಾಗಿರಿ

MUTALIK NEW
Published on

ಹುಬ್ಬಳ್ಳಿ : ರಮಜಾನ್ ಹಬ್ಬದಲ್ಲಿ ಹಿಂದುಗಳು ತಮ್ಮ ದೇವರ ಪೂಜೆ ಮಾಡಬಾರದಾ ? ಹನುಮಾನ ಚಾಲಿಸ್ ಹಾಗೂ ಭಕ್ತಿಗೀತೆ ಹಚ್ಚಬಾರದಾ ? ಇದೇನು ಪಾಕಿಸ್ತಾನವಾ ? ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಪ್ರಶ್ನಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ, ಬೆಂಗಳೂರಿನ ಅಂಗಡಿವೊಂದರಲ್ಲಿ ಹಿಂದು ವ್ಯಕ್ತಿಯೊಬ್ಬ ಹನುಮಾನ ಚಾಲಿಸಾ ಹಚ್ಚಿದ್ದರಿಂದ ಕೆಲವು ಗೂಂಡಾಗಳು ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಇಂತಹ ಗುಂಡಾ ಪ್ರವೃತ್ತಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

ಭಾರತದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದ್ದು, ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಗೂಂಡಾಗಿರಿ ನಡೆಸುವುದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ನಡೆಯುತ್ತಿರುವ ಇಂತಹ ದೌರ್ಜನ್ಯಗಳನ್ನು ಎದುರಿಸಲು ಹಿಂದು ಸಮಾಜ ಸಿದ್ಧವಾಗಿದೆ. ಮುಸ್ಲಿಂರು ತಮ್ಮ ಪಾಡಿಗೆ ಹಬ್ಬ ಆಚರಣೆ ಮಾಡಿಕೊಳ್ಳಲಿ. ಹಿಂದುಗಳು ತೊಂದರೆ ಕೊಡುವುದಿಲ್ಲ. ಆದರೆ, ನಮ್ಮ ಆಚರಣೆಗೆ ತೊಂದರೆ ನೀಡಿದರೆ ಸುಮ್ಮನೆ ಕೂರುವುದಿಲ್ಲ. ಲೋಕಸಭೆ ಚುನಾವಣೆ ಬಳಿಕೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಎಚ್ಚರಿಕೆ ನೀಡಿದರು.

ದೇಶ ಸುರಕ್ಷತೆ ಹಾಗೂ ಹಿಂದುಗಳ ರಕ್ಷಣೆ ದೃಷ್ಟಿಯಿಂದ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಿನಿಂದ ಶ್ರೀರಾಮ ಸೇನೆ ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂಬ ಅಭಿಯಾನ ಹಮ್ಮಿಕೊಳ್ಳುತ್ತಿದೆ ಎಂದರು.

ಶ್ರೀರಾಮ ಸೇನೆ ರಾಜಕೀಯ ಪಕ್ಷವಲ್ಲ. ಬಿಜೆಪಿ ಯಾರಿಗೇ ಟಿಕೆಟ್ ನೀಡಿದರೂ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net