

ಹುಬ್ಬಳ್ಳಿ: ರಾಜ್ಯದ ರೈತರು, ದೇವಸ್ಥಾನಗಳ ಆಸ್ತಿಯನ್ನು ಕಬಳಿಸಲು ವಕ್ಫ ಅದಾಲತ್ ಮೂಲಕ ಹುನ್ನಾರ ನಡೆಸಿರುವ ಸಚಿವ ಜಮೀರ್ ಅಹ್ಮದ್ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ರೈತರನ್ನು ಬೀದಿಗೆ ತಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ ಅದಾಲತ್ ಗಳು ದೇಶದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಡುತ್ತಿವೆ. ರೈತರ ಜಮೀನು, ದೇವಸ್ಥಾನ, ಮನೆ, ಮಠ ಹಾಗೂ ಗರಡಿ ಮನೆ ಆಸ್ತಿಗಳನ್ನು ವಕ್ಫ ಬೋರ್ಡ್ ಪಡೆಯುತ್ತಿರುವುದು ಖಂಡನೀಯ. ಇದು ಗಂಭೀರವಾದ ವಿಷಯ, ದೇಶದಲ್ಲಿ ವೈರಸ್ನಂತೆ ಹರಡುತ್ತಿದೆ ಎಂದರು.
ಸಚಿವ ಜಮೀರ ಅಹ್ಮದ್ ಖಾನ್ ಹೇಳಿರುವಂತೆ ಕೆಲವು ಅಧಿಕಾರಿಗಳು ಇಂತಹ ಕೆಲಸ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಉಪನೋಂದಣಾಧಿಕಾರಿ ಹಾಗೂ ಪಿಡಿಒಗಳು ಮುಸ್ಲಿಮರು ಇರುವಲ್ಲಿ ಸಂರ್ಪೂಣ ತನಿಖೆ ನಡೆಸಿ, ಇವರು ದೇಶ ದ್ರೋಹದ ಕೆಲಸ ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧಾರವಾಡ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಅರ್ಧಕ್ಕರ್ಧ ಗ್ರಾಮಗಳ ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರಿಸಲಾಗಿದೆ. ಇದಕ್ಕೆಲ್ಲ ಕಾರಣೀಕರ್ತರು ಕಾಂಗ್ರೆಸ್ ನವರು. ಆ ಪಕ್ಷ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇದೇನು ಅಕ್ಬರ್, ಬಾಬರ್ ನ ಆಡಳಿತವೇ? ಎಂದರು.
2006ರಲ್ಲಿ 1.20 ಲಕ್ಷ ಎಕರೆ ಇದ್ದ ವಕ್ಫ ಬೋರ್ಡ್ ಆಸ್ತಿ ಈಗ, 9.40ಲಕ್ಷ ಎಕರೆಗೆ ಏರಿದೆ. ಜಗತ್ತಿನ ನಾಲ್ಕು ಮುಸ್ಲಿಂ ರಾಷ್ಟ್ರಗಳಲ್ಲಿಯೂ ಇಷ್ಟೊಂದು ಆಸ್ತಿ ಇಲ್ಲ. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವುದಾಗಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಸದ್ಯ ಅವರ ಜನಸಂಖ್ಯೆ ಹಾಗೂ ಆಸ್ತಿ ಕಬಳಿಕೆಯ ಹುನ್ನಾರ ನೋಡಿದರೆ ಕೆಲವೇ ವರ್ಷಗಳಲ್ಲಿ ಇಸ್ಲಾಂ ದೇಶವಾಗಲಿದೆ ಎಂದು ಮುತಾಲಿಕ್ ಎಚ್ಚರಿಸಿದರು.
ರಾಜ್ಯದಲ್ಲಿ 23 ಸಾವಿರ ಮಠಗಳಿದ್ದು, ಇನ್ನಾದರೂ ಮಠಾಧೀಪತಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಅಂದಾಗ ಮಾತ್ರ ದೇಶ ಉಳಿಯಲಿದೆ. ನೀವು ಬೀದಿಗೆ ಬಂದರೆ ನಿಮ್ಮ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದು ಘೋಷಿಸಿದರು.
ವಕ್ಫ ಬೋರ್ಡ್ಗೆ ತಿದ್ದುಪಡಿ ತರಲು ಪ್ರಧಾನಿ ಮೋದಿ ಮುಂದಾಗಿರುವುದು ಸ್ವಾಗತಾರ್ಹ. ಅವರದು ಉತ್ತಮ ನಿರ್ಣಯ. ಕೋಟಿ ಕೋಟಿ ಹಿಂದುಗಳು ಬೆಂಬಲ ನೀಡುತ್ತೇವೆ. ಆದರೆ, ತಿದ್ದುಪಡಿ ಬಗ್ಗೆ ಮಾಹಿತಿ ಪಡೆದ ಮುಸ್ಲಿಮರು ಸಂಘರ್ಷ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದರು.
ವಿಜಯಪುರದಲ್ಲಿ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ನೀಡಿದೆ. ವಕ್ಪ ಅನ್ಯಾಯಕ್ಕೆ ಒಳಗಾದ ಎಲ್ಲರೂ ಸೇರಿ ಶ್ರೀರಾಮ ಸೇನೆಯ ನೇತೃತ್ವದಲ್ಲಿ ನ. 7ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.