

ವಿಜಯವಾಣಿ ಸುದ್ದಿಜಾಲ ಆನೇಕಲ್
ಹಿಂದುಗಳ ತಾಳ್ಮೆಯೇ ತಪ್ಪಾಯಿತೇ?, ನಮ್ಮ ತಾಳ್ಮೆಯ ವರ್ತನೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿ, ಅನಂತರ ಚಂಪಕಧಾಮ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಾಧ್ಯಮದ ಜತೆ ಮಾತನಾಡಿದರು. ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಸದ್ಯ, ಎಚ್ಚರಿಕೆ ಕೊಡುವ ಮಾನಸಿಕ ಸ್ಥಿತಿ ನಮ್ಮಲ್ಲಿ ಇಲ್ಲ. ಆರ್‌ಎಸ್‌ಎಸ್ ಹಾಗೂ ಬಜರಂಗದಳ ಸುಮ್ಮನಿರಲು ಸಾಧ್ಯವಿಲ್ಲ. ನಮ್ಮ ದೇಶದ ಅನ್ನ ತಿಂದು ನಮ್ಮ ವಿರುದ್ಧವೇ ಬರುತ್ತಿದ್ದಾರೆ ಎಂದು ನಾಗಮಂಗಲ ಗಲಭೆ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಮುಸ್ಲಿಮರು ಅವರದೇ ಸರ್ಕಾರ ಎಂದು ಭಾವಿಸಿದ್ದಾರೆ. ಇದರಿಂದ ಸಾಕಷ್ಟು ಗಲಭೆ ಉಂಟಾಗುತ್ತಿವೆ. ನಾವು ಎಂದೂ ಮುಸ್ಲಿಂ ಹಬ್ಬಗಳಿಗೆ ವಿರೋಧ ಮಾಡಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಹಿಂದುಗಳ ವಿರೋಧಿ ನೀತಿ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಅವಧೂತ ಗ್ಲೋಬಲ್ ಟ್ರಸ್ಟ್ ಮಹೇಂದ್ರಶರ್ಮ, ಚಂಪಕಧಾಮದೇವಾಲಯದ ಮಹದೇವ್ ಮತ್ತಿತರರು ಇದ್ದರು.
ಪ್ರಾಣಿ ವೈವಿಧ್ಯಕಂಡು ಫಿದಾ! ಬನ್ನೇರುಘಟ್ಟದಲ್ಲಿರುವ ಪ್ರಾಣಿ ಪಕ್ಷಿಗಳು ಬೇರೆಲ್ಲೂ ಕಾಣಸಿಗುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿ-ಪಕ್ಷಿಗಳ ವೀಕ್ಷಣೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿ ಮಾತನಾಡಿದರು. ಉದ್ಯಾನವನದ ಪ್ರಾಣಿ ಸಂಗ್ರಹಾಲಯ ಎಲ್ಲಡೆ ಗಮನ ಸೆಳೆಯುತ್ತಿದೆ. ಬಗೆಬಗೆಯ ವಿವಿಧ ಪ್ರಭೇದದ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಪ್ರಾಣಿಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.
ಪ್ರಾಣಿಗಳ ರಕ್ಷಣೆ ಹಾಗೂ ಅವುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ಇಟ್ಟು ನೋಡಿಕೊಂಡಾಗ ಮಾತ್ರ ಕಾಡಿನಲ್ಲಿ ಇರುವ ಪ್ರಾಣಿಗಳಂತೆ ಮೃಗಾಲಯದಲ್ಲೂ ಕೂಡ ಅವುಗಳು ಆನಂದವಾಗಿ ಇರಲು ಸಾಧ್ಯ. ಕೇವಲ ಪ್ರಾಣಿ ಸಂಗ್ರಹಾಲಯ ಇದ್ದರೆ ಸಾಕಾಗುವುದಿಲ್ಲ, ಅವುಗಳ ಆರೈಕೆ ಕೂಡ ಅದೇ ರೀತಿಯಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು. ಉದ್ಯಾನವನದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಪ್ರಾಣಿಗಳು ಹಾಗೂ ಅವುಗಳ ಆರೈಕೆಯ ಬಗ್ಗೆ ಮಾಹಿತಿ ನೀಡಿದರು.