30ರೊಳಗೆ ಮೈಶುಗರ್ ಸಂಪೂರ್ಣ ಕಾರ್ಯಾಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ

ಗೋಪಾಲಯ್ಯ ಕೆ 3
Published on

ಮಂಡ್ಯ: ಮೈಶುಗರ್ ಕಾರ್ಖಾನೆ ಸೆ.30 ರೊಳಗಾಗಿ ಸಂಪೂರ್ಣವಾಗಿ ಚಾಲನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ನಗರದ ಮೈಶುಗರ್‌ಗೆ ಶನಿವಾರ ಭೇಟಿ ನೀಡಿ ಕೆಲಸ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಕಾರ್ಖಾನೆಯ ಎರಡನೇ ಬಾಯ್ಲರ್‌ನ ಕಾರ್ಯ ಸೆ.19ರಿಂದ ಪ್ರಾರಂಭವಾಗಬೇಕು. ಮೈಶುಗರ್ ಕಾರ್ಯವ್ಯಾಪ್ತಿಗೆ ಬರುವ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಒಂದು ವೇಳೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶಪಡಿಸಿಕೊಳ್ಳಲು ಕ್ರಮವಹಿಸಿ ಎಂದರು.

ರೈತರಲ್ಲಿ ವಿಶ್ವಾಸ ಮೂಡಿಸಿ ರೈತರಿಂದ ಕಬ್ಬು ಖರೀದಿಸಿ ನಿಗದಿತ ಅವಧಿಯೊಳಗೆ ಪಾವತಿ ಮಾಡಬೇಕು. ಇದರಿಂದ ರೈತರಲ್ಲಿ ಕಾರ್ಖಾನೆಯ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ. ಸೆ.30ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಖಾನೆಗೆ ಆಹ್ವಾನಿಸಿ ಇಲ್ಲಿಯ ಎಲ್ಲ ಘಟಕಗಳ ಕಾರ್ಯನಿರ್ವಾಹಣೆಯನ್ನು ಪರಿಚಯಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಖುದ್ದು ಪರಿಶೀಲಿಸುತ್ತೇನೆ. ಕಾರ್ಖಾನೆ ಪುನಾರಾಂಭಗೊಂಡಿರುವುದರಿಂದ ಸಣ್ಣ ಪುಟ್ಟ ತೊಂದರೆಗಳು ಉಂಟಾಗಬಹುದು. ಅವುಗಳನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಬೇಕು ಎಂದರು.

ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ರಾಯಪುರ, ಜಿಲ್ಲಾಧಿಕಾರಿ ಎಸ್.ಅಶ್ವಥಿ, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಎಸಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net