ಯಶಸ್ವಿಯಾಗಿ ನಡೆದ ಮಸ್ಟರಿಂಗ್ ಕಾರ್ಯ

09mdk08
Published on

ಮಡಿಕೇರಿ:

ವಿಧಾನಸಭಾ ಚುನಾವಣೆ ಸಂಬಂಧ ಮಸ್ಟರಿಂಗ್ ಕಾರ್ಯ ನಗರದ ಸಂತ ಜೋಸೆಫರ ಶಾಲೆ ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಂಗಳವಾರ ನಡೆಯಿತು.

ವಿಧಾನಸಭಾ ಚುನಾವಣೆ ಸಂಬಂಧ ಜಿಲ್ಲೆಯ ೫೪೩ ಮತಗಟ್ಟೆಗಳಿಗೆ ನಿಯೋಜಿಸಿರುವ ಎಲ್ಲಾ ಹಂತದ ಪೋಲಿಂಗ್ ಅಧಿಕಾರಿಗಳು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ತಮಗೆ ಹಂಚಿಕೆಯಾದ ಮತಗಟ್ಟೆಯ ಸಂಖ್ಯೆಯನ್ನು ತಿಳಿದುಕೊಂಡು ನಿಗದಿಪಡಿಸಿದ ಕೌಂಟರ್‌ಗೆ ತೆರಳಿ ತಮ್ಮ ಮತಗಟ್ಟೆಗೆ ನಿಯೋಜಿಸಿರುವ ಮತಗಟ್ಟೆ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು. ಬಳಿಕ ಸೆಕ್ಟರ್ ಅಧಿಕಾರಿಗಳಿಂದ ಚುನಾವಣೆ ಸಂಬಂಧ ಮಾಹಿತಿ ಪಡೆದು ಮತಗಟ್ಟೆ ಕಾರ್ಯನಿರ್ವಹಣೆಗೆ ಬೇಕಾಗಿರುವ ಸಾಮಗ್ರಿಗಳನ್ನು ಪಡೆದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರರಾದ ಕಿರಣ್ ಗೌರಯ್ಯ, ಎಸ್.ಎನ್.ನರಗುಂದ, ಚುನಾವಣಾ ತಹಶೀಲ್ದಾರ್ ರವಿಶಂಕರ್ ಹಾಗೂ ಸೆಕ್ಟರ್ ಅಧಿಕಾರಿಗಳು ಮಸ್ಟರಿಂಗ್ ಕಾರ್ಯನಿರ್ವಹಣೆ ಸಂಬಂಧ ಮೇಲ್ವಿಚಾರಣೆ ನಡೆಸಿ ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಬಳಿಕ ತಮ್ಮ ತಮ್ಮ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳು ತೆರಳಿದರು. ಮತಗಟ್ಟೆ ಅಧ್ಯಕ್ಷಾಧಿಕಾರಿ(ಪಿಆರ್‌ಒ), ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್‌ಒ(೧ ನೇ ಪೊಲಿಂಗ್ ಅಧಿಕಾರಿ), ೨ ನೇ ಮತಗಟ್ಟೆ ಅಧಿಕಾರಿ(೨ನೇ ಪೊಲಿಂಗ್ ಅಧಿಕಾರಿ), ೩ ನೇ ಮತಗಟ್ಟೆ ಅಧಿಕಾರಿ(೩ ನೇ ಪೊಲಿಂಗ್ ಅಧಿಕಾರಿ) ಮತಗಟ್ಟೆ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.
ಮತಗಟ್ಟೆ ಅಧಿಕಾರಿಗಳು ಪರಸ್ಪರ ಚರ್ಚಿಸಿದರು. ಸುಸೂತ್ರವಾಗಿ ಚುನಾವಣೆ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಅವರು ನಿರ್ದೇಶನ ನೀಡಿದರು. ಸೆಕ್ಟರ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಸಂಬಂಧ ಹಲವು ಮಾಹಿತಿ ಮಾರ್ಗದರ್ಶನ ನೀಡಿದರು.

ಚೆಕ್‌ಲಿಸ್ಟ್: ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್, ವಿವಿ ಪ್ಯಾಟ್, ರಿಜಿಸ್ಟ್ರರ್ ಆಫ್ ವೋಟರ್ಸ್‌, ವೋಟರ್ ಸ್ಲಿಪ್, ಗುರುತು ಮಾಡಿರುವ ಮತದಾರರ ಪಟ್ಟಿ ಇತರ ಪ್ರತಿಗಳು, ಅಡ್ರಸ್ ಟ್ಯಾಗ್, ಟೆಂಡರ್ ಬ್ಯಾಲೆಟ್ ಪೇಪರ್, ಮತದಾರರ ಅಂಕಿ ಅಂಶಗಳು, ಅಭ್ಯರ್ಥಿ, ಚುನಾವಣಾ ಏಜೆಂಟ್, ಅಭ್ಯರ್ಥಿಯ ಮಾದರಿ ಸಹಿಯ ಪ್ರತಿ, ಇಂಕ್, ಗ್ರೀನ್ ಪೇಪರ್ ಸೀಲು, ಮಾಕ್‌ಪೋಲ್ ಸೀಲು, ಹೀಗೆ ಚೆಕ್‌ಲಿಸ್ಟ್‌ನಂತೆ ನಮೂನೆ ಹಾಗೂ ಸಾಮಗ್ರಿಗಳನ್ನು
ಲೇಖನ ಸಾಮಗ್ರಿಗಳಾದ ಪೆನ್ಸಿಲ್, ಪೆನ್ನು, ಬಿಳಿ ಹಾಳೆ, ಗುಂಡು ಪಿನ್ನು, ಸೀಲಿಂಗ್ ವ್ಯಾಕ್ಸ್, ಮತ ಹಾಕುವ ಅಂಕಣ, ದಾರ, ಸೂಜಿ, ಮೊಳೆ, ಮೇಣದ ಬತ್ತಿ, ರಬ್ಬರ್ ಬ್ಯಾಂಡ್, ಡ್ರಾಯಿಂಗ್ ಪಿನ್ಸ್, ಪಾಲಿಥಿನ್ ಬ್ಯಾಗ್, ಕವರ್‌ಗಳು ಹೀಗೆ ವಿವಿಧ ರೀತಿಯ ಸಾಮಗ್ರಿಗಳನ್ನು ಮತಗಟ್ಟೆ ಅಧಿಕಾರಿಗಳು ಪಡೆದುಕೊಂಡರು.

ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಮತ್ತು ವಿವಿ ಪ್ಯಾಟ್‌ಗಳ ಸಂಬಂಧ ಪರಿಶೀಲಿಸಿ ಖಾತರಿಪಡಿಸಿಕೊಂಡರು. ಹೀಗೆ ಮಸ್ಟರಿಂಗ್ ಕಾರ್ಯ ಸಂಬಂಧಿಸಿದಂತೆ ಮಾಹಿತಿ ಪಡೆದು ತಮ್ಮ ಮತಗಟ್ಟೆಗಳಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net