ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಇದೇ ವೇಳೆ ಸಂಸದ ಡಿ.ಕೆ. ಸುರೇಶ ದೇಶವನ್ನು ತುಂಡರಿಸುವ ಮಾತನಾಡಿದ್ದಾರೆ. ಕಾಂಗ್ರೆಸ್​ಗೆ ಧೈರ್ಯ, ಮಾನ-ಮರ್ಯಾದೆ ಇದೆಯಾದಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ದೇಶವನ್ನು ತುಂಡರಿಸುವ ಮೂಲಕ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ದಕ್ಷಿಣ ಭಾರತ ರಾಷ್ಟ್ರ ರಚಿಸಬೇಕೆಂದು ಸಂಸದ ಡಿ.ಕೆ. ಸುರೇಶ ಹೇಳಿಕೆ ನೀಡಿರುವುದು ದೇಶದ್ರೋಹದ ಕೆಲಸವಾಗಿದೆ. ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ಹೇಳಿರುವ ರಾಷ್ಟ್ರಕವಿಗೆ ಮಾಡಿರುವ ಅವಮಾನವಾಗಿದೆ. ಸಂಸದ ಸುರೇಶ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶದಿಂದ ಹೇಳಿದರು.

ಯಾರೇ ಆದರೂ ದೇಶದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರಬೇಕು. ತುಂಡರಿಸುವ ಮಾತನಾಡಬಾರದು. ನಾವು ಅಧಿಕಾರದಲ್ಲಿ ಇಲ್ಲದಾಗ ಹೀಗೆ ಮಾತನಾಡಿರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಬೋಗಸ್ ಆಗಿದೆ. ದೇಶದ ಭದ್ರತೆ, ಸುರಕ್ಷತೆಗೆ ಮೋದಿಯೇ ಗ್ಯಾರಂಟಿ. ದೇಶದ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚಿನ ತನ್ನ ವರದಿಯಲ್ಲಿ ಹೇಳಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net