ಗಣೇಶ ವಿಸರ್ಜನೆ ಸಮಯ ನಿಗದಿ ಆದೇಶ ರದ್ದುಪಡಿಸಿ

sriram sena
Published on

ಹುಬ್ಬಳ್ಳಿ: ಗಣೇಶ ವಿಸರ್ಜನೆ ಮೆರವಣಿಗೆಯನ್ನು ರಾತ್ರಿ 10 ಗಂಟೆಗೆ ಮುಕ್ತಾಯಗೊಳಿಸುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮೆರವಣಿಗೆಗೆ ಸಮಯ ನಿಗದಿಪಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಶ್ರೀ ರಾಮ ಸೇನಾ ಕಾರ್ಯದರ್ಶಿ ರಾಜು ಖಾನಪ್ಪನವರ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರಲ್ಹಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪೊಲೀಸ್ ಅಧಿಕಾರಿಗಳನ್ನು ಬಳಸಿ ರಾತ್ರಿ 10 ಗಂಟೆಗೆ ಮೆರವಣಿಗೆ ಸೀಮಿತಗೊಳಿಸುವಂತೆ ಮಾಡಿದ್ದರು. ಈಗ ವರಸೆ ಬದಲಿಸಿ ರಾತ್ರಿ 10 ಗಂಟೆಯೊಳಗೆ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಮುಗಿಸಲಾಗುವುದಿಲ್ಲವೆಂದು ಹೇಳಿರುವುದು ಖಂಡನೀಯ ಎಂದು ಹೇಳಿದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರನ್ನು ತಳ್ಳಾಡಿ, ನೂಕಾಡಿ ದೌರ್ಜನ್ಯವೆಸಗಿದ್ದಾರೆ. ಪೊಲೀಸರು ತಳ್ಳಾಟ, ನೂಕಾಟ ನಡೆಸಿರುವ ವಿಡಿಯೋ ನಮ್ಮ ಬಳಿ ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸು ದುರ್ಗದ, ಬಸವರಾಜ ಗೌಡರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net