ಆಯೋಗದ ಅವಧಿ ವಿಸ್ತರಣೆ ಕೈಬಿಡಿ

ashok sajjan
Published on

ಹುಬ್ಬಳ್ಳಿ: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ರಚಿಸಲಾಗಿರುವ 7ನೇ ವೇತನ ಆಯೋಗದ ಕಾಲಾವಧಿ ವಿಸ್ತರಣೆಯನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಅಶೋಕ ಸಜ್ಜನ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗದ 1 ವರ್ಷದ ಅವಧಿ ನ. 19 ಪೂರ್ಣಗೊಳ್ಳಲಿದೆ. ನ. 6ರಂದು ರಾಜ್ಯ ಸರ್ಕಾರ ಮತ್ತೆ 6 ತಿಂಗಳ ಕಾಲಾವಧಿಗೆ ವಿಸ್ತರಣೆ ಮಾಡಿರುವುದು ಸರಿಯಲ್ಲ. ಈ ಹಿಂದೆ 6 ತಿಂಗಳು ವಿಸ್ತರಣೆ ಮಾಡಿದಾಗ ನಾವೆಲ್ಲ ಹೋರಾಟ ಮಾಡಿದ ಪರಿಣಾಮವಾಗಿ ಅಂದಿನ ಬಿಜೆಪಿ ಸರ್ಕಾರ ಶೇ. 17ರಷ್ಟು ಮಧ್ಯಂತರ ಪರಿಹಾರ ನೀಡಿತ್ತು ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ತಕ್ಷಣ 7ನೇ ವೇತನ ಆಯೋಗದ ವರದಿಯನ್ನು ತರಿಸಿಕೊಂಡು ಯಥಾವತ್ತಾಗಿ ಜಾರಿಗೊಳಿಸಬೇಕು. ವಿಳಂಬ ಮಾಡಿದಲ್ಲಿ ಶೇ. 30 ರಷ್ಟು ಮಧ್ಯಂತರ ಪರಿಹಾರ ಘೊಷಿಸಬೇಕು. ಹೊಸ ಪಿಂಚಣಿ ಯೋಜನೆ ಕೈ ಬಿಟ್ಟ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಹೇಳಿದರು.

ಶಿಕ್ಷಕರ ನಿಯಂತ್ರಣ ವರ್ಗಾವಣೆ ಕಾಯ್ದೆಯಡಿ ಪ್ರತಿವರ್ಷ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು. ವರ್ಷದಲ್ಲಿ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯಶಿಕ್ಷಕರ ಹುದ್ದೆಗೆ, ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡಬೇಕು. ಪ್ರಾರಂಭಿಸಬೇಕು. ಮುಂಬಡ್ತಿ ಪಡೆಯದೆ ಅದೆಷ್ಟೋ ಶಿಕ್ಷಕರು ನಿವೃತ್ತಿಯಾಗುತ್ತಿರುವುದು ಬೇಸರ ಸಂಗತಿ ಎಂದರು.

80 ಸಾವಿರ ಪದವಿಧರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಆರರಿಂದ ಎಂಟನೇ ವರ್ಗಕ್ಕೆ ವಿಲೀನಗೊಳಿಸಬೇಕು. ಆರ್ಥಿಕ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೋವಿಂದ ಜುಜಾರೆ, ಹನುಮಂತ ಮೇಟಿ, ಎ.ಐ. ಸೋಲ್ಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net