ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು

h31-Ramzan 1
Published on

ಹುಬ್ಬಳ್ಳಿ: ರಂಜಾನ್ ಹಬ್ಬದ ನಿಮಿತ್ತ ಇಲ್ಲಿಯ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಮುಸ್ಲಿಮರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೌಲ್ವಿ ಮೌಲಾನಾ ಜಹಿರುದ್ದೀನ್ ಖಾಜಿ ಅವರು ಕುರಾನ್ ಪಠಿಸಿದರು. ದೇಶದ ಐಕ್ಯತೆಗೆ ಸರ್ವಧರ್ಮೀಯರೊಂದಿಗಿನ ಸಹಬಾಳ್ವೆ ಅತ್ಯಗತ್ಯ ಎಂದು ಬೋಧಿಸಿದರು.

ಬೆಳಗ್ಗೆಯಿಂದಲೇ ಮುಸ್ಲಿಮರು ಮೈದಾನದತ್ತ ಧಾವಿಸಿದರು. ಸಾಲಾಗಿ ಕುಳಿತು ಪ್ರಾರ್ಥಿಸಿದರು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿದರು.

ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾಂವಿ ಇತರರು ಇದ್ದರು.

ಕಪ್ಪು ಪಟ್ಟಿ: ಉಣಕಲ್ ರೈಲ್ವೆ ಸ್ಟೇಷನ್ ಹತ್ತಿರದ ಟಿಂಬರ್ ಯಾರ್ಡ್‌ನ ಈದ್ಗಾ ಮೈದಾನದಲ್ಲಿ ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ಮುಸ್ಲಿಮರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರಂಜಾನ್ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹುಡಾ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಪಾಲಿಕೆ ಮಾಜಿ ಸದಸ್ಯ ಹಜರತ್‌ಅಲಿ ದೂಡ್ಡಮನಿ, ಶರೀಫ್ ಗರಗದ, ರಫೀಕ್ ಅಹ್ಮದ್ ದೂಡ್ಡಮನಿ, ದಾವಲಸಾಬ್ ನದಾಫ್, ಖಾದರಬಾಷಾ ಶಿಬಾರಗಟ್ಟಿ, ಹಜರತ್‌ಅಲಿ ನದಾಫ್, ಹುಸೇನಬಾಷಾ ಹಜರತನವರ, ದಾದಾಪೀರ ದಾದುನವರ, ಮಹೇಬೂಬಸಾಬ್, ಮೌಲಾಸಾಬ್ ಶಿಭಾರಗಟೆ ಇತರರು ಇದ್ದರು.

ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಕ್ರೋಶ: ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ವಿರೋಧಿಸಿ ಎಸ್‌ಡಿಪಿಐ ನೇತೃತ್ವದಲ್ಲಿ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಕೆಲವರು ಪ್ರತಿಭಟನೆ ನಡೆಸಲು ಮುಂದಾದರು. ಕೇಂದ್ರ ಸರ್ಕಾರದ ವಿರುದ್ಧ ಹಲವು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪು ಚದುರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net