

ಮಂಗಳೂರು: ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಸಿಹಿ ತಿಂಡಿ ವಿತರಣೆ ನಡೆದವು.
ವಿದ್ಯಾರ್ಥಿಗಳಿಂದ ಮಸೀದಿ-ಮದ್ರಸಗಳ ವಠಾರದಲ್ಲಿ ಪ್ರವಾದಿಯ ಮದ್‌ಹ್ ಗೀತೆಗಳು, ಮೆರವಣಿಗೆ, ವಾಹನ ರ‌್ಯಾಲಿ, ಮೌಲಿದ್ ಮಜ್ಲಿಸ್, ಕೂಟು ಝಿಯಾರತ್ ಇತ್ಯಾದಿ ನಡೆಯಿತು. ಮದ್ರಸದ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇಸ್ಲಾಮಿಕ್ ಕ್ಯಾಲೆಂಡರ್‌ನ ರಬೀಉಲ್ ಅವ್ವಲ್ ತಿಂಗಳು ಸೆ.28ರಿಂದ ಆರಂಭಗೊಂಡಿದ್ದು, ಅಂದಿನಿಂದ ತಿಂಗಳ ಕಾಲ ಸುನ್ನಿ ಮುಸ್ಲಿಮರು ಎಲ್ಲ ಮಸೀದಿ ಮತ್ತು ಬಹುತೇಕ ಮನೆಗಳಲ್ಲಿ ಪ್ರವಾದಿ ಗುಣಗಾನದ ಮೌಲಿದ್ ಪಾರಾಯಣ ಮಾಡಿಸುತ್ತಾರೆ. ಅಲ್ಲದೆ ಮದ್ರಸಗಳ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
ಪ್ರವಾದಿ ಮುಹಮ್ಮದ್ ಪೈಗಂಬರ್‌ರ ಜನ್ಮದಿನದ ನೆನಪಿಗಾಗಿ ಸಾರ್ವಜನಿಕವಾಗಿ ದಫ್, ಹಾಡುಗಳೊಂದಿಗೆ ಕಾಲ್ನಡಿಗೆ ಮತ್ತು ವಾಹನ ರ‌್ಯಾಲಿಯ ಪ್ರವಾದಿ ಸಂದೇಶ ಜಾಥಾ ನಡೆಸಲಾಯಿತು. ಮದ್ರಸ, ಮಸೀದಿಗಳಲ್ಲಿ ಸಭಾ ಕಾರ್ಯಕ್ರಮ ನಡೆಸಿ ಪ್ರವಾದಿ ಜೀವನದ ಸಂದೇಶ ನೀಡಲಾಯಿತು.
ರ‌್ಯಾಲಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಿ, ಪಾನೀಯ ವಿತರಿಸಲಾಯಿಯಿತು. ಕಾರ್ಯಕ್ರಮಗಳಲ್ಲಿ ಮಕ್ಕಳು, ಯುವಕರು, ಕುಟುಂಬದ ಹಿರಿಯ ಸದಸ್ಯರು ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.
ಹಿಂದೂ, ಮುಸ್ಲಿಂ, ಕ್ರೈಸ್ತರ ಮಧ್ಯೆ ಬಾಂಧವ್ಯ ಬೆಸೆಯುವ ಸೌಹಾರ್ದ ಕಾರ್ಯಕ್ರಮ ಕೂಡ ಕೆಲವು ಕಡೆ ನಡೆಸಲಾಗಿದೆ. ಉಳಿದಂತೆ ಬೆಂಗರೆ, ತಣ್ಣೀರುಬಾವಿ, ಜೆಪ್ಪು, ಬೋಳಾರ, ಕಂಕನಾಡಿ, ಅಡ್ಯಾರ್ ಕಣ್ಣೂರು, ಮಾರಿಪಳ್ಳ, ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೆ.ಸಿ.ರೋಡ್, ಸೋಮೇಶ್ವರ, ಕೋಟೆಕಾರ್, ದೇರಳಕಟ್ಟೆ, ಕುತ್ತಾರ್, ಕೊಣಾಜೆ, ನಾಟೆಕಲ್, ಕಿನ್ಯ, ಮಂಜನಾಡಿ, ಮುಡಿಪು, ಮತ್ತಿತರ ಕಡೆ ಮೀಲಾದುನ್ನಬಿ ಆಚರಿಸಲಾಯಿತು.