ಮಳಿಗೆ ದುರಸ್ತಿಗೆ ಅವಕಾಶ ಕಲ್ಪಿಸಲು ಮುಸ್ಲಿಂ ಸಮಾಜ ಮನವಿ

25 LXR
Published on

ಲಕ್ಷ್ಮೇಶ್ವರ: ಪಟ್ಟಣದಲ್ಲಿ ೧೯೮೮ರಲ್ಲಿ ಮುಸ್ಲಿಂ ಸಮಾಜದ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ಪಟ್ಟಣದ ಪುರಸಭೆಯಿಂದ ದೇಸಾಯಿ ಬಣದ ಜಾಗೆ ಮಂಜೂರು ಮಾಡಲಾಗಿದೆ. ಈಗ ಅದರಲ್ಲಿ ನಿರ್ಮಿಸಲಾಗಿದ್ದ ಮಳಿಗೆಗಳು ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ದುರಸ್ತಿಗೆ ಅವಕಾಶ ಕಲ್ಪಿಸುವಂತೆ ಬುಧವಾರ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಪಟ್ಟಣದ ಮುಸ್ಲಿಂ ಸಮುದಾಯದವರು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿ ಮುಸ್ಲಿಂ ಸಮಾಜದ ಪ್ರಮುಖರು, ಹಿಂದೆ ಅನೇಕ ಸಮಾಜದ ಸಂಘ-ಸಂಸ್ಥೆ ಹಾಗೂ ದೇವಸ್ಥಾನಗಳಿಗೆ ಪುರಸಭೆಯ ಜಾಗೆ ಮಂಜೂರು ಮಾಡಿದ ಉದಾಹರಣೆಗಳಿವೆ. ಅದೇ ರೀತಿ ಅಂಜುಮನ್-ಎ-ಇಸ್ಲಾಂ ಕಮಿಟಿಗೆ ಒಂದು ಕಾರ್ಯಲಯ ಹಾಗೂ ೫ ಸಣ್ಣ ಮಳಿಗೆ ಪುರಸಭೆ ಪರವಾನಗಿಯೊಂದಿಗೆ ನಿರ್ಮಿಸಿಕೊಳ್ಳಲಾಗಿದೆ. ಅವು ಹಾಳಾಗಿದ್ದರಿಂದ ದುರಸ್ತಿ ಕೈಗೊಳ್ಳಲಾಗಿದೆ. ಕೆಲವು ಸಂಘಟನೆಗಳು ಕೆಲಸಕ್ಕೆ ಅಡ್ಡಿಪಡಿಸುತ್ತಿವೆ. ಇದರಿಂದ ಹಿಂದು- ಮುಸ್ಲಿಮರ ಬಾಂಧವ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಮಳಿಗೆ ದುರಸ್ತಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಮುಸ್ಲಿಂ ಸಮಾಜದವರು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಮುಸ್ಲಿಂ ಸಮಾಜದ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು, ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net