28ರಂದು ಮುಸ್ಲಿಮರ ಪ್ರತಿಭಟನೆ

Muslim Protest on the 28th
ವಿಜಯಪುರದ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮುಖಂಡ ಅಬ್ದುಲಹಮೀದ್​ ಮುಶ್ರೀಫ್​ ಮಾತನಾಡಿದರು. ಶಕೀಲ್​ ಬಾಗಮಾರೆ, ಫಯಾಜ್​ ಕಲಾದಗಿ, ಮೈನುದ್ದೀನ್​ ಬೀಳಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರವಾದಿ ಹಜರತ್​ ಮಹಮ್ಮದ್​ ಪೈಗಂಬರ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಏ. 28 ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯ ಅಬ್ದುಲಹಮೀದ್​ ಮುಶ್ರೀಫ್​ ಹೇಳಿದರು.

ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಲಿದೆ. ಬಳಿಕ ಶಾಸಕ ಯತ್ನಾಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಮ್ಮ ರಾಜಕೀಯದ ಕುರಿತು ಯತ್ನಾಳ ಟೀಕಿಸಲಿ ಅಥವಾ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಲಿ. ಆದರೆ, ಅದನ್ನೆಲ್ಲ ಬಿಟ್ಟು ಸದ್ಯ ನಮ್ಮ ಧರ್ಮಗುರುಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ನಾನಾಗಲಿ ಹಾಗೂ ನಮ್ಮ ಸಮಾಜ ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.

ಮುಖಂಡ ಮೊಹ್ಮದರಫೀಕ್​ ಟಪಾಲ್​ ಮಾತನಾಡಿ, ಅಂದು ಪಾತೀತವಾಗಿ ಪ್ರತಿಭಟನೆ ನಡೆಸಲಾಗುವುದು. ನಗರ ಶಾಸಕರ ಗೆಲುವಿಗೆ ಕಾರಣರಾದವರು ಕೂಡ ಇಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಅಭಿವೃದ್ಧಿ ಬಿಟ್ಟು ಮುಸ್ಲಿಮರ ವಿರುದ್ಧ ಮಾತನಾಡುವ ಚಾಳಿಯಿಂದ ಜನರು ಬೇಸರಗೊಂಡಿದ್ದಾರೆ ಎಂದರು.

ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ಮುಸ್ಲಿಂ ಧರ್ಮಗುರು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಯತ್ನಾಳ ಮಾತಿನಿಂದ ಸಮಾಜಕ್ಕೆ ನೋವಾಗಿದೆ. ಯಾರಿಗೂ ತೊಂದರೆ ನೀಡಬಾರದು ಎಂಬುದು ಪ್ರವಾದಿ ಅವರ ತತ್ವ. ಪ್ರತಿಭಟನೆಯನ್ನು ಸೀಮಿತ ಜನರೊಂದಿಗೆ ನಡೆಸಲಾಗುವುದು ಎಂದರು.

ಮುಖಂಡರಾದ ಶಕೀಲ್​ ಬಾಗಮಾರೆ, ಫಯಾಜ್​ ಕಲಾದಗಿ, ಮೈನುದ್ದೀನ್​ ಬೀಳಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net