ದುರುದ್ದೇಶದಿಂದ ಮುಸ್ಲಿಂರ ಮೀಸಲಾತಿ ರದ್ದು: ಪ್ರಗತಿಪರ ಸಂಘಟನೆಯ ಡಿ.ಎಚ್.ಪೂಜಾರ ಆರೋಪ

Published on

ಸಿಂಧನೂರು: ಮುಸ್ಲಿಂಮರಿಗೆ ನೀಡಿದ್ದ 2(ಬಿ) ಪ್ರವರ್ಗಯಡಿಯಲ್ಲಿ ಶೇ.4 ಮೀಸಲಾತಿಯನ್ನು ರದ್ದು ಮಾಡಿರುವುದು ರಾಜ್ಯ ಸರ್ಕಾರ ನಿರ್ಧಾರ ಸಂವಿಧಾನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಂಚಾಲಕ ಡಿ.ಎಚ್.ಪೂಜಾರ ಒತ್ತಾಯಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.


ಮುಸ್ಲಿಂ ಕುರಿತು ಅಧ್ಯಯನ ಮಾಡಿದ ಮಿಲ್ಲರ್ ವರದಿ, ಚಿನ್ನಪ್ಪರೆಡ್ಡಿ ಆಯೋಗ, ವೆಂಕಟಸ್ವಾಮಿ ಆಯೋಗ, ನ್ಯಾ.ರಾಜಿಂದರ್ ಸಾಚಾರ್ ವರದಿ ಹಾಗೂ ನಾಗನಗೌಡ ಸಮಿತಿಯು ಹಿಂದುಳಿದ ವರ್ಗಕ್ಕೆ ಸೇರಿಸಲು ಶಿಫಾರಸು ಮಾಡಿವೆ. ಆದರೆ, ಮುಸ್ಲಿಂರ ಮೀಸಲಾತಿ ರದ್ದುಪಡಿಸಿದ ಕ್ರಮಕ್ಕೆ ಯಾವುದೇ ಆಧಾರಗಳಿಲ್ಲ. ದುರುದ್ದೇಶದಿಂದ ಕೂಡಿದ ಸರ್ಕಾರದ ನಿರ್ಧಾರ ಮುಸ್ಲಿಂ ಅಲ್ಪಸಂಖ್ಯಾತ ವಿರೋಧಿ ದ್ವೇಷ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಟೀಕಿಸಿದರು.


ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಸಿಖ್ಖರು, ಜೈನರು, ಕ್ರಿಶ್ಚಿಯನ್ನರು ಮೀಸಲಾತಿಯ ವ್ಯಾಪ್ತಿಯಲ್ಲಿದ್ದಾರೆ. ಮುಸ್ಲಿಂಮರಿಗಷ್ಟೇ ಧರ್ಮದ ಲೇಪನದ ಮೂಲಕ ಮೀಸಲಾತಿ ತಿರಸ್ಕರಿಸಿರುವುದು ಬೊಮ್ಮಾಯಿ ಸರ್ಕಾರದ ಸಮರ್ಥನೆ ಹಸಿ ಸುಳ್ಳಿನಿಂದ ಕೂಡಿದೆ. ಚುನಾವಣೆ ಮುನ್ನ ಮುಸ್ಲಿಂಮರಿಗಿದ್ದ ಮೀಸಲಾತಿಯನ್ನು ರದ್ದುಮಾಡಿ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಕ್ಕೆ ಒದಗಿಸಲಾಗಿದೆ. ಸಮಾಜಗಳನ್ನು ಮೋಸಗೊಳಿಸುವ ತಂತ್ರ ಭಾಗವಾಗಿದೆ. ಹಾಗಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಸಹ ಸರ್ಕಾರದ ಈ ಕ್ರಮವನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು. ಒಕ್ಕೂಟದ ಸಂಚಾಲಕರಾದ ಡಿ.ಎಚ್.ಕಂಬಳಿ, ಎಸ್.ದೇವೇಂದ್ರಗೌಡ, ಚಂದ್ರಶೇಖರ ಗೊರಬಾಳ, ಬಾಷುಮಿಯಾ, ಬಸವರಾಜ ಬಾದರ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net