ಮೈಸೂರು: ಎರಡು ಹುಲಿ ಸಂರಕ್ಷಿತಾರಣ್ಯ ಮತ್ತು 4 ಆಣೆಕಟ್ಟು ಹೊಂದಿರುವ ಎಚ್.ಡಿ.ಕೋಟೆಯ ಸೂಕ್ಷ್ಮ ವಲಯದಲ್ಲಿ 140ಕ್ಕೂ ಹೆಚ್ಚು ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕಾಗಿ ಅಲ್ಲಿನ ಬಡ ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಖಾಸಗಿಯವರು ರೆಸಾರ್ಟ್ ನಿರ್ಮಾಣಕ್ಕಾಗಿ ಎಚ್.ಡಿ. ಕೋಟೆ ತಾಲೂಕಿನ ಬೆಳ್ತೂರು ಪಂಚಾಯಿತಿಯ ಮಗ್ಗೆ ಗ್ರಾಮದ ಸರ್ವೆ ನಂ. 55ರಲ್ಲಿ ಮನೆ ಕಟ್ಟಿಕೊಂಡಿದ್ದ ಅಬ್ದುಲ್ ರಜಾಕ್ ಎಂಬವರ ಕುಟುಂಬವನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಮನೆಯನ್ನು ಯಾವುದೇ ನಿಯಮ ಅನುಸರಿಸದೇ ಸ್ಥಳೀಯ ಆಡಳಿತ ನೆಲಸಮ ಮಾಡಿದೆ ಎಂದು ದೂರಿದರು.
ಮತಕ್ಕಾಗಿ ಮುಸ್ಲಿಂರನ್ನು ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್, ಮುಸ್ಲಿಮರ ಬಗ್ಗೆ ಕಾಳಜಿ ಮಾತನಾಡುವ ಸಿದ್ದರಾಮಯ್ಯ ಅವರೇಕೆ ಮಗ್ಗೆ ಗ್ರಾಮದ ಬಡ ಮುಸ್ಲಿಂ ಕುಟುಂಬದ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.