

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಅನಾರೋಗ್ಯ ಪೀಡಿತ ಹಿಂದು ಸಮುದಾಯದ ವ್ಯಕ್ತಿಯೊಬ್ಬರನ್ನು ಮುಸ್ಲಿಂ ಕುಟುಂಬವೊಂದು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಆಶ್ರಮಕ್ಕೆ ಸೇರಿಸಿದ ಮತ್ತು ನಿಧನದ ಬಳಿಕ ಅಂತ್ಯ ಸಂಸ್ಕಾರಕ್ಕೂ ನೆರವಾಗುವ ಮೂಲಕ ಮಾನವೀಯತೆ ಮೆರೆದು ಸೌಹಾರ್ದದ ಸಂದೇಶ ಸಾರಿದ ಘಟನೆ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ. ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಕೆಯ್ಯೂರು ಗ್ರಾಮದ ಅಂಕತ್ತಡ್ಕ ಸಮೀಪದ ಕಜೆ ನಿವಾಸಿ ತಿಮ್ಮಪ್ಪ ನಾಯ್ಕ (56) ಸರ್ಕಾರಿ ಜಾಗದಲ್ಲಿ ಜೋಪಡಿಯೊಂದನ್ನು ನಿರ್ಮಿಸಿಕೊಂಡು ಒಬ್ಬಂಟಿ ಜೀವನ ನಡೆಸುತ್ತಿದ್ದರು. ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಅವರಿಂದ ದೂರವಾಗಿದ್ದರು. ಕೆಲ ತಿಂಗಳ ಹಿಂದೆ ಅನಾರೋಗ್ಯ ಪೀಡಿತರಾಗಿದ್ದ ತಿಮ್ಮಪ್ಪ ನಾಯ್ಕ ಅವರು ಅಂಕತ್ತಡ್ಕದ ಸಯ್ಯದ್ ಇಬ್ರಾಹಿಂ ಅವರ ಮನೆಗೆ ಬಂದು ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಸಯ್ಯದ್ ಇಬ್ರಾಹಿಂ ತನ್ನ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ತಿಮ್ಮಪ್ಪ ನಾಯ್ಕ ಅವರು ಸಯ್ಯದ್ ಇಬ್ರಾಹಿಂ ಅವರ ಮನೆಯ ಜಗಲಿಯಲ್ಲಿ ರಾತ್ರಿ ವೇಳೆ ಮಲಗುತ್ತಿದ್ದರು.
ತಿಮ್ಮಪ್ಪ ನಾಯ್ಕರ ಅನಾರೋಗ್ಯ ಉಲ್ಬಣಗೊಂಡಾಗ ಸಯ್ಯದ್ ಇಬ್ರಾಹಿಂ ಅವರ ಸಹೋದರಿ ಅಂಕತ್ತಡ್ಕ ಅಂಗನವಾಡಿ ಕೇಂದ್ರದ ಸಹಾಯಕಿ ಹಸೀನಾ ಬೇಗಂ ಗೆಳತಿ ಆಯಿಷಾರನ್ನು ಸೇರಿಸಿಕೊಂಡು ಏ.25ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಿಮ್ಮಪ್ಪ ನಾಯ್ಕ ಅವರನ್ನು ಕರೆದೊಯ್ದಿದ್ದರೂ ದಾಖಲೆಗಳ ತಾಂತ್ರಿಕ ಸಮಸ್ಯೆಯಿಂದಾಗಿ ಅಲ್ಲಿ ದಾಖಲು ಮಾಡಲು ಸಾಧ್ಯವಾಗಿರಲಿಲ್ಲ. ಕೆಲ ದಿನಗಳ ಬಳಿಕ ಹಸೀನಾ ಬೇಗಂ ಸಾಮಾಜಿಕ ಕಾರ್ಯಕರ್ತ ಅಲ್ತಫ್ ಎಂಬುವರ ಸಹಕಾರ ಪಡೆದು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ ಚೇತರಿಸಿಕೊಳ್ಳದ ಕಾರಣ ತಿಂಗಳ ಬಳಿಕ ಹಸೀನಾ ಬೇಗಂ ಕೆಲವರ ಸಹಕಾರ ಪಡೆದು ತಿಮ್ಮಪ್ಪ ನಾಯ್ಕರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ, ಆ ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದರು. ತುಸು ಚೇತರಿಸಿಕೊಂಡಿದ್ದ ತಿಮ್ಮಪ್ಪ ನಾಯ್ಕರನ್ನು ಜೂ.2ರಂದು ವಾಮಂಜೂರಿನ ‘ಅವೆ ಮರಿಯ’ ಆಶ್ರಮಕ್ಕೆ ಸೇರಿಸಿದ್ದರು.
ಭಾನುವಾರ ತಿಮ್ಮಪ್ಪ ನಾಯ್ಕ ಆಶ್ರಮದಲ್ಲಿ ನಿಧನರಾಗಿದ್ದು, ಈ ವಿಚಾರವನ್ನು ಹಸೀನಾ ಬೇಗಂ ಸ್ಥಳೀಯ ಕೆಲವರಿಗೆ ತಿಳಿಸಿದ್ದರೂ ಯಾರೂ ಸ್ಪಂದನೆ ನೀಡಿರಲಿಲ್ಲ. ಬಳಿಕ ಅವರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿ, ಆಯಿಷಾರೊಂದಿಗೆ ವಾಮಂಜೂರಿನ ಆಶ್ರಮಕ್ಕೆ ತೆರಳಿದ್ದರು. ಈ ನಡುವೆ ಸಂಪ್ಯ ಪೊಲೀಸರ ಮೂಲಕ ವಿಷಯ ತಿಳಿದ ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಶಶಿಧರ ಪಾಟಾಳಿ ಎಂಬವರನ್ನು ಕರೆದುಕೊಂಡು ಆಶ್ರಮಕ್ಕೆ ತೆರಳಿದ್ದರು. ಅಲ್ಲಿ ಶರತ್‌ಕುಮಾರ್, ಹಸೀನಾ ಬೇಗಂ ಮತ್ತಿತರರು ಸೇರಿಕೊಂಡು ಮೃತದೇಹವನ್ನು ಪುತ್ತೂರಿನ ಹಿಂದೂ ರುದ್ರಭೂಮಿಗೆ ತರುವ ವ್ಯವಸ್ಥೆ ಮಾಡಿದರು.
ತಿಮ್ಮಪ್ಪ ನಾಯ್ಕರ ಪುತ್ರ ದಿನೇಶ್ ಎಂಬುವರನ್ನು ಅಂತ್ಯ ಸಂಸ್ಕಾರಕ್ಕೆ ಬರುವ ವ್ಯವಸ್ಥೆಯನ್ನು ಶರತ್‌ಕುಮಾರ್ ಮಾಡಿದ್ದು, ಅಂತ್ಯ ಸಂಸ್ಕಾರ ಪುತ್ರನ ಉಪಸ್ಥಿತಿಯಲ್ಲಿಯೇ ನಡೆಯಿತು.