

ಮಡಿಕೇರಿ: ಕ್ರೀಡಾಪಟುಗಳು ಯಾವುದೇ ದುಶ್ಚಟಗಳಿಗೆ ಆಕರ್ಷಿತರಾಗದೆ ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಕರೆ ನೀಡಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಚಿಲ್ ಬಾಯ್ಸ ಮಡಿಕೇರಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ.೧೬ರ ವರೆಗೆ ನಡೆಯಲಿರುವ ೨೦ನೇ ವರ್ಷದ ಕೊಡಗು ಮುಸ್ಲಿಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆಗಳು ಮಾನಸಿಕ ದೃಢತೆ ಮತ್ತು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ. ಮುಸ್ಲಿಂ ಸಮಾಜದಲ್ಲಿ ಉತ್ತಮ ಪ್ರತಿಭೆಗಳಿದ್ದರೂ ಸೂಕ್ತ ವೇದಿಕೆಗಳು ಸಿಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿರುವ ಗ್ರಾಮೀಣ ಪ್ರದೇಶದ ಎಲ್ಲಾ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಡಿ ತರುವ ಮತ್ತು ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದರು.
ಕಳೆದ ೧೯ ವರ್ಷಗಳಿಂದ ಕೊಡಗು ಮುಸ್ಲಿಂ ಕಪ್ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಾ ಕ್ರೀಡಾ ತಂಡಗಳನ್ನು ಒಗ್ಗೂಡಿಸಿ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಚಿಲ್ ಬಾಯ್ಸ ಮಡಿಕೇರಿ ತಂಡ ಮಾಡುತ್ತಿದೆ. ಸಮುದಾಯದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮನ್ಸೂರ್ ಆಲಿ ಹೇಳಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್‌ನ ಗೌರವಾಧ್ಯಕ್ಷ ಅಬ್ದುಲ್ ರಶೀದ್ ಎಡಪಾಲ ಧ್ವಜಾರೋಹಣ ನೆರವೇರಿಸಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಮುಸ್ಲಿಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು, ಸಮುದಾಯ ಬಾಂಧವರು ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಮತ್ತು ಚಿಲ್ ಬಾಯ್ಸ ಮಡಿಕೇರಿಯ ಪದಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಎ.ಎ.ಅಬ್ದುಲ್ ಖಾದರ್, ಕೊಡಗಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಕೊಡಗು ಮುಸ್ಲಿಂ ಕಪ್ ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಟೆನ್ನಿಸ್ ಮಾತ್ರವಲ್ಲದೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕೊಡಗಿನ ಕ್ರೀಡಾಪಟುಗಳು ರಾಷ್ಟ್ರಮಟ್ಟದ ತಂಡಗಳಲ್ಲಿ ಆಡುವಂತಾಗಲಿ ಎಂದು ಶುಭ ಹಾರೈಸಿ, ಸರ್ಕಾರದಿಂದ ಅನುದಾನ ತರಲು ಪ್ರಯತ್ನ ಮಾಡಲಾಗುವುದು ಎಂದರು.
ನಗರಸಭಾ ಸದಸ್ಯ ಬಶೀರ್ ಅಹ್ಮದ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಒಂದು ಕುಟುಂಬವನ್ನೇ ನಿರ್ವಹಣೆ ಮಾಡುವುದು ಕಷ್ಟ, ಪರಿಸ್ಥಿತಿ ಹೀಗಿರುವಾಗ ಮುಸ್ಲಿಂ ಸೋರ್ಟ್ಸ್ ಕ್ಲಬ್ ಎಲ್ಲಾ ಕ್ರೀಡಾಪಟುಗಳನ್ನು ಒಗ್ಗೂಡಿಸಿ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಮಾತನಾಡಿ, ೨೦೦೩ರಿಂದ ನಿರಂತರವಾಗಿ ಪ್ರತಿವರ್ಷ ಕೊಡಗು ಮುಸ್ಲಿಂ ಕಪ್ ಪಂದ್ಯಾವಳಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ೨೦ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು.
ಸುಂಟಿಕೊಪ್ಪದ ಸಮಾಜ ಸೇವಕ ಪಿ.ಎಲ್.ಹರ್ಷದ್ ಬ್ಯಾಟ್ ಮಾಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಉಪಾಧ್ಯಕ್ಷ ಸಿ.ಎ.ರಾಜಿಕ್, ನಿರ್ದೇಶಕ ಎಂ.ಎಸ್.ಬಾಷ, ಎನ್.ಸಿ.ಹಾರಿಸ್, ಚಿಲ್ ಬಾಯ್ಸ ಮಡಿಕೇರಿ ಅಧ್ಯಕ್ಷ ಎಂ.ಎ.ಉನೈಸ್, ಕೊಡಗು ಯುವ ಕಾಂಗ್ರೆಸ್ ನ ಪ್ರಮುಖ ಹರ್ಷದ್ ಲತೀಫ್ ಉಸ್ಥಿತರಿದ್ದರು. ಆಸಿಫ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಇದೇ ಸಂದರ್ಭ ಕೊಡಗು ಮುಸ್ಲಿಂ ಸ್ಪೋಟ್ಸ್ ಟ್ರಸ್ಟ್ ಗೌರವಾಧ್ಯಕ್ಷ ಅಬ್ದುಲ್ ರಶೀದ್ ಎಡಪಾಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.