ಮುಸಲ್ಮಾನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ: ಜಬ್ಬಾರ್ ಕಲಬುರ್ಗಿ

muslim
Published on

ಕುಶಾಲನಗರ:

ಕರ್ನಾಟಕದಲ್ಲಿ ಒಂದು ಕೋಟಿ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಉದ್ಯೋಗದಿಂದ ಹಿಂದುಳಿದಿದ್ದು, ಸರ್ಕಾರ ಮುಸ್ಲಿಮರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ರಾಜ್ಯಾಧ್ಯಕ್ಷÀ ಜಬ್ಬಾರ್ ಕಲಬುರ್ಗಿ ಹೇಳಿದರು.

ಕೊಡಗು ಜಿಲ್ಲೆಯ ಕರ್ನಾಟಕ ಮುಸ್ಲಿಂ ಯೂನಿಟಿ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಬಡತನ, ನಿರುದ್ಯೋಗ ಹಾಗೂ ಅನಕ್ಷರತೆಯಿಂದ ನಲುಗುತ್ತಿದೆ. ಕೇವಲ ವೋಟ್ ಬ್ಯಾಂಕಿಗೋಸ್ಕರ ಮಾತ್ರ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಗಳು ಅಧಿಕಾರಕ್ಕೇರಿದ ನಂತರ ತಾವು ನೀಡಿದ ಭರವಸೆ, ನಂಬಿಕೆ, ವಿಶ್ವಾಸವನ್ನು ಮರೆತಿದ್ದಾರೆ.

ಸರ್ಕಾರ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದೆ. 88 ರಿಂದ 90 ಶೇಕಡ ಸಮುದಾಯದ ಮತಗಳನ್ನು ಪಡೆದಿರುವ ಸರ್ಕಾರ, ಮುಸ್ಲಿಮರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಹಕ್ಕುಗಳಿಗೆ ಒತ್ತಾಯಿಸಬೇಕು. ಎಲ್ಲರೂ ಸರ್ಕಾರವನ್ನು ಪ್ರಶ್ನಿಸುವಂತಾಗಬೇಕು. ಅದಕ್ಕೆ ಮೊದಲು ನಾವು ಒಗ್ಗೂಡಿ ಸಂಘಟಿತರಾಗಬೇಕು ಎಂದರು.

ಕರ್ನಾಟಕ ಮುಸ್ಲಿಂ ಯೂನಿಟಿ ಗೌರವಾಧ್ಯಕ್ಷ ಜಿ.ಎ. ಬಾವಾ ಮಾತನಾಡಿ, ದೇಶಾದ್ಯಂತ ಮುಸ್ಲಿಂ ಸಮುದಾಯ ಶೋಷಣೆಗೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿತು. ಆದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ 2ಬಿ ಮೀಸಲಾತಿ ಬಗ್ಗೆ ಜಾಣ ಮೌನ ವಹಿಸಿದೆ. ಇವರಿಗೂ ಬಿಜೆಪಿಯವರಿಗೂ ವ್ಯತ್ಯಾಸವೇನು. ಸರ್ಕಾರ ಮುಸ್ಲಿಮರ ಹಕ್ಕೊತ್ತಾಯಗಳಿಗೆ ಸಹಕರಿಸಬೇಕು ಎಂದರು.

ನಂತರ ವೇದಿಕೆಯಲ್ಲಿದ್ದ ಗಣ್ಯರು ಸದ್ಯದ ಪರಿಸ್ಥಿತಿಯಲ್ಲಿ ಮುಸಲ್ಮಾನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಇದೇ ಸಂದರ್ಭ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲೆಯ ಅಧ್ಯಕ್ಷರಾದಿ ಕೆ.ಎ. ಯಾಕೂಬ್ ಮತ್ತು ಕೊಡಗು ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅಮೀನ್ ಮೊಹ್ಸಿನ್ ಅವರನ್ನು ಆಯ್ಕೆ ಮಾಡಲಾಯಿತು.

ಕರ್ನಾಟಕ ಮುಸ್ಲಿಂ ಯೂನಿಟಿ ರಾಜ್ಯ ಉಪಾಧ್ಯಕ್ಷ ನಾಸಿರ್ ಇಂಪಾಳ್, ರಾಜ್ಯ ಯುವ ಘಟಕದ ಅಧ್ಯಕ್ಷ ಎನ್.ಎಮ್. ನೂರ್ ಅಹ್ಮದ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಫರಹಾರ ನಿಗಾರ ಬೇಗಂ, ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಸಂಘಟನೆಯ ಕಿತ್ತೂರು ಕರ್ನಾಟಕ ಸಂಚಾಲಕ ಮೆಹಬೂಬ್ ಸರಕವಾಸ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಮ್ಜರ್ ಅಹ್ಮದ್ ವೇದಿಕೆಯಲ್ಲಿ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ ಮುಸ್ಲಿಂ ನೇತಾರರು, ಜನಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭ ಕೊಡಗು ಜಿಲ್ಲೆಯ ಕರ್ನಾಟಕ ಮುಸ್ಲಿಂ ಯೂನಿಟಿ ವತಿಯಿಂದ ವಿವಿಧ 8 ಅಂಶಗಳನ್ನು ಒಳಗೊಂಡ ಹಕ್ಕೊತ್ತಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ನಿರ್ಧರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net