

ಮಡಿಕೇರಿ:
ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಮರಿದ್ದ ಶೇ. ೪ ಮೀಸಲಾತಿಯನ್ನು ರದ್ದು ಮಾಡಿರುವುದು ಜನದ್ರೋಹದ ಕ್ರಮವಾಗಿದೆ ಎಂದು ತೀವ್ರ ಆಕ್ರೋಶ ಹೊರಹಾಕಿರುವ ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಪ್ರಮುಖರಾದ, ಅಲ್ಪಸಂಖ್ಯಾತ ಮುಖಂಡ ಕುಂಜಿಲದ ನಾಸರ್ ಮಕ್ಕಿ, ಮುಖ್ಯಮಂತ್ರಿಗಳು ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗಿರುವುದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ೨(ಬಿ) ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿರುವುದು ಅತ್ಯಂತ ಅವೈಜ್ಞಾನಿಕ. ಇದು ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾದಂತಾಗಿದೆ. ಮುಖ್ಯಮಂತ್ರಿಗಳು ಈ ಸಂವಿಧಾನ ವಿರೋಧಿ ನಿಲುವು ತೆಗೆದುಕೊಳ್ಳಲು ಅದರ ಹಿಂದಿರುವ ಪ್ರೇರಣೆಯಾದರೂ ಏನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಾಜಕೀಯ ಪ್ರೆ?ರಿತವಾಗಿ ಕೈಗೊಂಡ ನಿರ್ಧಾರ ಇದಾಗಿದೆ.
ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರುವುದು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದಲ್ಲೂ ಕಡು ಬಡವರು ಮತ್ತು ಬಡವರು ಇದ್ದಾರೆ. ಅವರು ಮೇಲ್ವರ್ಗದ ಬಡವರಿಗಾಗಿ ಇರುವ ಇಡಬ್ಲ್ಯುಎಸ್‌ನಲ್ಲಿ ಹೇಗೆ ಸ್ಪರ್ಧೆ ಮಾಡುತ್ತಾರೆ ಎಂದು ಪ್ರಶ್ನಿಸಿದ ನಾಸರ್ ಮಕ್ಕಿ ಅವರು, ಮುಸ್ಲಿಮರಿಗೆ ಮೀಸಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿರುವುದರಿಂದ ಸಮುದಾಯದ ಪ್ರತಿಭಾವಂತರು ಶಿಕ್ಷಣ ಮತ್ತು ಉದ್ಯೋಗದಿಂದ ತೀವ್ರವಾಗಿ ವಂಚಿತರಾಗಲಿದ್ದಾರೆ. ಮುಸ್ಲಿಮರಿಗೆ ಅನ್ಯಾಯವೆಸಗಿರುವ ಬಿಜೆಪಿ ಸರಕಾರ ಇದರಿಂದ ಸಾಧಿಸಿದಾದರೂ ಏನು? ಇದು ಯಾರನ್ನು ಮೆಚ್ಚಿಸಲು ಮಾಡಿರುವ ಓಲೈಕೆ ರಾಜಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಲಿ ಎಂದು ಸವಾಲೆಸದಿದ್ದಾರೆ.