

ಮಸ್ಕಿ: ಹವಾಮಾನ ಇಲಾಖೆಯ ಮನ್ಸೂಚನೆಯಂತೆ ಆ. 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಸ್ಕಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದ್ದು, ಹಳ್ಳದ ದಂಡೆಯ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಯೋಜನೆಯ ಇಂಜಿನಿಯರ್ ದಾವುದ್ ತಿಳಿಸಿದ್ದಾರೆ.
ಮಸ್ಕಿ ನಾಲಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಒಂದು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಮಂಗಳವಾರ ಹಳ್ಳಕ್ಕೆ ಬಿಡಲಾಗಿದೆ. ಅಧಿಕ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಯಾವುದೇ ಕ್ಷಣದಲ್ಲೂ ಜಲಾಶಯದ ನಾಲ್ಕು ಗೇಟ್‌ಗಳ ಮೂಲಕ ಹಳ್ಳಕ್ಕೆ ನೀರು ಬಿಡಲಾಗುವುದು. ಇದರಿಂದ ಮಸ್ಕಿ ಹಳ್ಳದಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಹಳ್ಳದ ದಂಡೆಯ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್, ಮಸ್ಕಿ, ಹುಲ್ಲೂರು, ಉದ್ಬಾಳ, ಬಳಗಾನೂರು ಸೇರಿದಂತೆ ಇತರ ಗ್ರಾಮಸ್ಥರು ಹಳ್ಳದಲ್ಲಿ ಇಳಿಯಬಾರದು ಹಾಗೂ ಜಾನುವಾರುಗಳನ್ನು ಹಳ್ಳದಲ್ಲಿ ಬಿಡಬಾರದು. ಈ ಬಗ್ಗೆ ಸಂಬಂಧಪಟ್ಟ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ.