ನಾಟಕಗಳು ಸಮಾಜದ ಕನ್ನಡಿ ಇದ್ದಂತೆ; ಶ್ರೀ ವರರುದ್ರಮುನಿ ಶಿವಾಚಾರ್ಯರ ಅಭಿಮತ

04012021 Maski Drama Opening
Published on

ಮಸ್ಕಿ: ನಾಟಕಗಳು ಸಮಾಜದ ಕನ್ನಡಿ ಇದ್ದಂತೆ ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.

ಪಟ್ಟಣದ ಗಚ್ಚಿನ ಮಠದಲ್ಲಿ ಭಾನುವಾರ ಸಂಜೆ ಹವ್ಯಾಸಿ ಕಲಾವಿದರು ಏರ್ಪಡಿಸಿದ್ದ ‘ಮೋಹಪುರ’ ಎಂಬ ರಂಗ ನಾಟಕದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಪ್ರತಿಬಿಂಬವಾಗಿ ನಾಟಕಗಳಲ್ಲಿ ನೋಡಬಹುದು ಎಂದರು.

ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪಾಟೀಲ ನಾಟಕವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಸಮುದಾಯ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವೇಂದ್ರಗೌಡ ಮಾತನಾಡಿ, ಕಾದಂಬರಿ ಆಧರಿತ ಮೋಹಪುರ ನಾಟಕ ಗ್ರಾಮೀಣ ಬದುಕಿನ ಹಳ್ಳಿಯ ರಾಜಕೀಯ, ಅಧಿಕಾರ, ಶ್ರೀಮಂತಿಕೆಯ ಅಟ್ಟಹಾಸ, ನೈತಿಕ ಶಕ್ತಿಯ ಪರೀಕ್ಷೆಯ ಕುರಿತು ನಾಟಕವಾಗಿದೆ. ಹಳ್ಳಿಗಳ ಬದಕನ್ನು ನಾಟಕಕಾರ ಸುಂದರವಾಗಿ ಚಿತ್ರಿಸಿದ್ದಾರೆ ಎಂದರು.

ಉಪನ್ಯಾಸಕ ಮಹಾಂತೇಶ ಮಸ್ಕಿ, ಮಸ್ಕಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ರಂಗ ನಿರ್ದೆಶಕ ರಾಂಜಾನ್‌ಸಾಬ್ ಉಳ್ಳಾಗಡ್ಡಿ, ಸರ್ಕಾರಿ ನೌಕರರ ಸಹಕಾರಿ ಅಧ್ಯಕ್ಷ ರುದ್ರಮುನಿ ಇದ್ದರು.

ಯಶಸ್ವಿ ಪ್ರಯೋಗ: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಇದೇ ಮೊದಲ ಬಾರಿಗೆ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಾಟಕ ಸಿದ್ಧಪಡಿಸಿಕೊಂಡು ಯಶಸ್ವಿಯಾಗಿ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net