

ಮಸ್ಕಿ: ಭತ್ತ ಕಟಾವು ಮಾಡುವ ಯಂತ್ರಕ್ಕೆ ಬಾಡಿಗೆ ದರ ನಿಗದಿ ಮಾಡುವ ಮೂಲಕ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಮಸ್ಕಿ ತಾಲೂಕು ಬಿಜೆಪಿ ರೈತ ಮೊರ್ಚಾದಿಂದ ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.
ಮೋರ್ಚಾ ತಾಲೂಕು ಅಧ್ಯಕ್ಷ ಜಿ. ವೆಂಕಟೇಶ್ವರರಾವ್ ಮಾತನಾಡಿ, ಮದ್ಯವರ್ತಿಗಳಿಂದ ಭತ್ತ ಕಟಾವು ಮಾಡಲು ಯಂತ್ರಗಳ ಅಭಾವ ಸೃಷ್ಟಿಸಿ ಹೆಚ್ಚಿನ ದರ ಪಡೆಯಲಾಗುತ್ತಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ದಾವಣಗೆರೆ ಜಿಲ್ಲಾಧಿಕಾರಿ, ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1,800 ರೂ. ನಿಗದಿಪಡಿಸಿ ಆದೇಶ ಮಾಡಿದ್ದಾರೆ. ಅದರಂತೆ ನಮ್ಮ ಜಿಲ್ಲೆಯ ರೈತರಿಗೆ ಅನೂಕೂಲವಾಗುವಂತೆ ಜಿಲ್ಲಾಧಿಕಾರಿ ದರ ನಿಗದಿಪಡಿಸಲಿ ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಪುರಸಭೆ ಸದಸ್ಯ ರವಿಗೌಡ ಪಾಟೀಲ್, ಎಸ್ಸಿ ಮೋರ್ಚಾ ಆಧ್ಯಕ್ಷ ಮೌನೇಶ ಮುರಾರಿ, ಚೇತನ ಪಾಟೀಲ್, ಸಂಗಮೇಶ ಹತ್ತಿಗುಡ್ಡ, ಶರಣಯ್ಯ ಗುಡದೂರು, ನಾಗರಾಜ ಯಂಬಲದ, ಬಸವರಾಜ ಕಡಬೂರು ಇದ್ದರು.