

ಮಸ್ಕಿ; ಮಳೆಗಾಲ ಆರಂಭಕ್ಕೂ ಮುನ್ನ ನಂದವಾಡಗಿ ಏತ ನೀರಾವರಿ ಕಾಮಗಾರಿ ಮುಗಿಸಿ ರೈತರ ಜಮೀನಿಗೆ ನೀರು ಹರಿಸಿ ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ ಒತ್ತಾಯಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದ ರೈತರ 30 ವರ್ಷದ ಹೋರಾಟದ ಫಲವಾಗಿ ನಂದವಾಡಗಿ ಏತ ನೀರಾವರಿಗೆ 2,200 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. 2017 ರಲ್ಲಿ ಕಾಮಗಾರಿ ಆರಂಭವಾಗಿದ್ದು, ಅವಧಿ ಮುಗಿದರೂ ಮುಗಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದ 36 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆ ಇದಾಗಿದ್ದು, ಗುತ್ತಿಗೆದಾರರ ನಿರ್ಲಕ್ಷೃದಿಂದ ಕಾಮಗಾರಿ ಮುಕ್ತಾಯಕ್ಕೆ ವಿಳಂಬವಾಗುತ್ತಿದೆ. ಈ ಕುರಿತು ಶಾಸಕರು ಮತ್ತು ನೀರಾವರಿ ಸಚಿವರಿಗೂ ಒತ್ತಾಯಿಸಿದ್ದೇವೆ. ವಿದ್ಯುತ್ ಪೂರೈಕೆ, ಪೈಪ್‌ಲೈನ್ ಕಾಮಗಾರಿ ಮುಗಿಸಿ, ಕೃಷಿಹೊಂಡ ನಿರ್ಮಿಸಿ, ಸೋಲಾರ್ ಒದಗಿಸಿದರೆ ಈ ಯೋಜನೆ ದೇಶದಲ್ಲೆ ಮಾದರಿಯಾಗಲಿದೆ. ಮೇ.30 ರೊಳಗಾಗಿ ಕಾಮಗಾರಿ ಮುಕ್ತಾಯಗೊಳಿಸಬೇಕು. ಗುತ್ತಿಗೆದಾರರು ಕುಂಟುನೆಪ ಹೇಳದೆ ಕಾಮಗಾರಿ ಆರಂಭಿಸಲಿ ಎಂದು ಆಗ್ರಹಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಬಿ.ಮುರಾರಿ, ಹೋರಾಟ ಸಮಿತಿಯ ಆದನಗೌಡ ಸಂತೆಕೆಲ್ಲೂರು, ಬಸವಂತರಾಯ ಕುರಿ, ಶರಣಗೌಡ ಬಸಾಪುರ, ರಮೇಶ ಶಾಸ್ತ್ರೀ, ಮಲ್ಲನಗೌಡ ಹಳ್ಳಿ, ಬಸವಂತರಾಯ ಕುರಿ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು ಇದ್ದರು.