

ಮಸ್ಕಿ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅಧಿಕಾರವಧಿಯಲ್ಲಿ ಕ್ಷೇತ್ರದ ಬಗ್ಗೆ ನಿರ್ಲಕ್ಷೃ ತೋರಿದ್ದರಿಂದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನನ್ನನ್ನು ಟೀಕಿಸುವ ನೈತಿಕತೆ ಅವರಿಗಿಲ್ಲ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಂದವಾಡಗಿ ಯೋಜನೆ ಸೇರಿ ವಿವಿಧ ನೀರಾವರಿ ಯೋಜನೆಗಳನ್ನು ಪರಿಶೀಲಿಸುವ ನೆಪದಲ್ಲಿ ಮಾಜಿ ಶಾಸಕರು ನಾಟಕ ಮಾಡುತ್ತಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ನಂದವಾಡಗಿ ಏತ ನೀರಾವರಿ ಯೋಜನೆ ಪರಿಶೀಲನೆಗೆ ಹೋಗುವಾಗ ಬಿಜೆಪಿಯ ಶಾಲು ಬದಿಗಿಟ್ಟು, ಹಸಿರು ಶಾಲು ಹಾಕಿಕೊಂಡು ವಿಡಿಯೋ, ಫೋಟೊ ತೆಗೆಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ‘ನಾವು ರೈತರ ಪರವಾಗಿದ್ದೇವೆ’ ಎಂದು ಪೋಸ್ ಕೊಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ನಾನು ಶಾಸಕನಾದ ಮೇಲೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನಂದವಾಡಗಿ ಏತ ನೀರಾವರಿ ಯೋಜನೆ ಆರಂಭವಾಗುತ್ತದೆ. 5ಎ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಶೀಘ್ರವೇ ಡಿಪಿಆರ್ ಸಲ್ಲಿಕೆಯಾಗಲಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ತ್ವರಿತವಾಗಿ ಟೆಂಡರ್ ಕರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕ್ಷೇತ್ರದಲ್ಲಿ ಹಾಳಾಗಿದ್ದ ಗ್ರಾಮೀಣ ರಸ್ತೆಗಳನ್ನು ಸುಧಾರಣೆ ಮಾಡಲಾಗಿದೆ. ಮಸ್ಕಿ ಪಟ್ಟಣದ ಅಭಿವೃದ್ಧಿಗಾಗಿ ಪ್ರಾಧಾನ್ಯತೆ ನೀಡಿದ್ದು, ಪ್ರಜಾಸೌಧ ಹಾಗೂ ಅಗ್ನಿ ಶಾಮಕ ಠಾಣೆ ಕಟ್ಟಡಕ್ಕೆ ಟೆಂಡರ್ ಕರೆಯಲಾಗಿದೆ. ಕೆರೆಗಳಿಗೆ ನೀರು ತುಂಬಿಸುವುದು, ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಬಸ್ ನಿಲ್ದಾಣ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಕ್ರಮವಹಿಸಿದ್ದು, ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿಪಡಿಸಲು 10 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.