

ಮಸ್ಕಿ: ಕ್ಷೇತ್ರದಲ್ಲಿ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಬಹುತೇಕ ಕಡೆ ಶಾಂತಿಯುತ ಮತದಾನವಾಯಿತು. ಕೆಲವೆಡೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.
ತಾಲೂಕಿನ ಹಾಲಪುರದಲ್ಲಿ ಒಬ್ಬನನ್ನು ಬಂಧಿಸಲಾಯಿತು. ಕುರಕುಂದಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದಳು. ಕನ್ನಾಳ ಗ್ರಾಮದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಗುಂಪು ಘರ್ಷಣೆ ನಡೆದು ಕೈ ಕೈ ಮೀಲಾಯಿಸುವ ಹಂತ ತಲುಪಿತ್ತು. ಮಟ್ಟೂರು, ತಲೇಖಾನ, ಗುಂಡಾ ಗ್ರಾಮಗಳಲ್ಲಿ ಮಾತಿನ ಚಕಮಕಿ ನಡೆದಿವೆ.
ಹಾಲಪುರ ಗ್ರಾಮದಲ್ಲಿ ನೂರು ಮೀ. ಒಳಗಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜನಜಂಗುಳಿ ಸೇರಿದ್ದನ್ನು ಕಂಡು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಪೊಲೀಸರಿಗೆ ಹೊರಗೆ ಕಳಿಸಲು ಸೂಚಿಸಿದರು. ಪೊಲೀಸರು ಜನ ಜಂಗುಳಿಯನ್ನು ಚದುರಿಸಲು ಪ್ರಯತ್ನಿಸಿದರು. ಕೇಳದಿದ್ದಾಗ ಪೊಲೀಸರು ಲಾಠಿ ಬೀಸಿ ಜನರ ಗುಂಪನ್ನು ಚದುರಿಸಿದರು.
ಬಂಧನ: ಹಾಲಪುರನಲ್ಲಿ ಕೇಸರಿ ಶಾಲು ಹಾಕಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರ ಇರುವ ಚೀಟಿಯನ್ನು ಹಂಚುತ್ತಿದ್ದವನನ್ನು ಬಂಧಿಸಲಾಗಿದೆ. ಹಾಲಪುರದಲ್ಲಿ ಮತದಾನಕ್ಕೆ ಜಾತ್ರೆಗೆ ಬರುವಂತೆ ಬಂದ ಮತದಾರರು ಕರೊನಾ ನಿಯಮಗಳನ್ನು ಉಲ್ಲಂಘಿಸಿದರು. ಇದನ್ನು ಕಂಡ ಜಿಲ್ಲಾಧಿಕಾರಿ ಸಿಡಿಮಿಡಿಗೊಂಡರು. ನಂತರ ಬಿಎಲ್‌ಒ ಗಳಿಗೆ ತರಾಟೆ ತೆಗೆದುಕೊಂಡು ಸ್ಯಾನಿಟೈಸರ್ ಹಾಕಿ ಒಳ ಬಿಡುವಂತೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ಪೊಲೀಸರಿಗೆ ತರಾಟೆ: ಕುರುಕುಂದ ಗ್ರಾಮದಲ್ಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕರ್ಯಕರ್ತರು ಪ್ರತಿಭಟನೆ ನಡೆಸಿದರು. ಮತಗಟ್ಟೆಯ ನೂರು ಮೀ.ಒಳಗೆ ಇರಬಾರದು ಎಂಬ ನೀತಿ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅನುಸರಿಸಲಾಗುತ್ತಿದೆ. ಬಿಜೆಪಿಯವರು ಒಳಗಡೆ ನಿಂತರೂ ಅವರಿಗೆ ಕಾನೂನು ಅನ್ವಯಿಸುವುದಿಲ್ಲವೇ? ಎಂದು ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾವತಿ ದೂರಿದರು. ಪದ್ಮಾವತಿ ಪೊಲೀಸರೊಂದಿಗೆ ವಾಗ್ವಾದ ಮಾಡಿದಾಗ ಬಿಗುವಿನ ವಾತಾವರಣ ಏರ್ಪಟ್ಟಿತ್ತು.