

ಮಸ್ಕಿ: ಎಸ್ಟಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಯಾರು ಶಾಸಕರಾಗಲಿದ್ದಾರೆ ಎಂಬ ಕುತೂಹಲ ಸಾರ್ವಜನಿಕವಾಗಿ ಹೆಚ್ಚಿದೆ.
ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ 7 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮತ್ತು ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ಬಸನಗೌಡ ತುರ್ವಿಹಾಳ ನಡುವೆ ನೇರ ಹಣಾಹಣಿ ನಡೆದಿದೆ. ಪ್ರತಾಪಗೌಡ ಪಾಟೀಲ ಗೆದ್ದರೆ ನಾಲ್ಕನೇ ಬಾರಿಗೆ ಶಾಸಕರಾಗಲಿದ್ದಾರೆ. ಆರ್.ಬಸನಗೌಡ ತುರ್ವಿಹಾಳ ಗೆದ್ದರೆ ಸತತ ಎರಡನೇ ಬಾರಿಗೆ ಶಾಸಕರಾಗುವರು.
ಮತದಾನ ದಿನ ಪಟ್ಟಣದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಸಹೋದರ ಸಿದ್ದನಗೌಡ ತುರ್ವಿಹಾಳ ಮೇಲೆ ಹಲ್ಲೆ ನಡೆದಿರುವುದರಿಂದ, ಮತ ಎಣಿಕೆ ದಿನದಂದು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
ಗುಂಪು ಕಟ್ಟಿಕೊಂಡು ತಿರುಗುವುದು, ಮೆರವಣಿಗೆ ನಡೆಸುವುದು, ಕಾರ್ಯಕ್ರಮಗ ಆಯೋಜನೆ, ನಾಲ್ಕು ಜನಕ್ಕಿಂತ ಹೆಚ್ಚಿನ ಜನರು ಸೇರಬಾರದು ಎಂದು ಧ್ವನಿವರ್ಧಕದ ಮೂಲಕ ಪೊಲೀಸ್ ಇಲಾಖೆ ಪ್ರಚಾರ ಕೈಗೊಂಡಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಸವೇಶ್ವರ ನಗರದಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಕಚೇರಿ ಬಳಿ ಮೀಸಲು ಪಡೆ ಪ್ಲಟೂನ್ ನಿಯೋಜನೆ ಮಾಡಲಾಗಿದೆ.
ಸುಳ್ಳು ಸುದ್ದಿ ಹಬ್ಬಿಸಿ ಶಾಂತಿ ಕದಡದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಸಂಜೀವ ಬಳಿಗಾಳ, ಪಿಎಸ್‌ಐ ಸಿದ್ದರಾಮ ಬಿದರಾಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.