ಬಳಗಾನೂರು, ಮೆದಕಿನಾಳಕ್ಕೆ ಪಿಯು ಕಾಲೇಜು ಮಂಜೂರು

Pratapgowda Patil Maski
SL
Published on

ಮಸ್ಕಿ: ಬಳಗಾನೂರು ಮತ್ತು ಮೆದಕಿನಾಳ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಸರ್ಕಾರ ಮುಂಜೂರಾತಿ ನೀಡಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 5 ಕಾಲೇಜುಗಳಿಗಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಎರಡು ಕಾಲೇಜುಗಳಿಗೆ ಮುಂಜೂರಾತಿ ನೀಡಿದೆ. ತೋರಣದಿನ್ನಿ, ಪಾಮನಕಲ್ಲೂರು ಹಾಗು ಸಂತೆಕೆಲ್ಲೂರಿನಲ್ಲಿ ಪದವಿಪೂರ್ವ ಕಾಲೇಜುಗಳ ಅವಶ್ಯವಿದೆ. ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಇನ್ನೂ ಮೂರು ಕಡೆ ಕಾಲೇಜುಗಳ ಮಂಜೂರಾತಿಗಾಗಿ ಬೇಡಿಕೆ ಸಲ್ಲಿಸುವುದಾಗಿ ತಿಳಿಸಿದರು.

43 ಕೋಟಿ ರೂ. ವೆಚ್ಚದಲ್ಲಿ ಮಸ್ಕಿ ನಾಲಾ ಯೋಜನೆ ಕಾಲುವೆಯ ಆಧುನಿಕರಣದ ಕಾಮಗಾರಿ ನಡೆದಿದ್ದು, ಶೇ.40 ಕೆಲಸ ಮುಗಿದಿದೆ. ಈಗ ಕಾಲುವೆಗೆ ನೀರು ಬಿಟ್ಟಿರುವುದರಿಂದ ಕೆಲಸ ಸ್ಥಗಿತವಾಗಿದೆ. ಪೂರ್ಣ ಪ್ರಮಾಣದ ಕೆಲಸ ಮುಗಿದ ನಂತರ ಯೋಜನೆ ವ್ಯಾಪ್ತಿಯ ಎಲ್ಲ ರೈತರ ಹೊಲಗಳಿಗೆ ನೀರು ಹರಿಸಲಾಗುವುದು. ಅ.1ರಂದು ನನ್ನ ಹುಟ್ಟು ಹಬ್ಬದ ಅಂಗವಾಗಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾರ್ಯಕ್ರಮ ಉದ್ಘಾಟಿಸುವರು ಎಂದು ಪ್ರತಾಪಗೌಡ ಪಾಟೀಲ ತಿಳಿಸಿದರು. ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಮಲ್ಲು ಯಾದವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net