

ಸಿಂಧನೂರು: ತುರ್ವಿಹಾಳ ಮತ್ತು ಗುಂಜಳ್ಳಿ ಹೋಬಳಿಯ 19 ಹಳ್ಳಿಗಳು ಮಸ್ಕಿ ತಾಲೂಕಿಗೆ ಸೇರಿಸಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾವು ಈಗಾಗಲೇ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದು, ಅವರೂ ಸಹ ತಮ್ಮ ಪತ್ರವನ್ನು ಹಿಂಪಡೆದಿದ್ದಾರೆ. 19 ಹಳ್ಳಿಗಳ ಜನರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ಪ್ರತಿಭಟನೆ ಮಾಡುವ ಅಗತ್ಯವೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದು, ಕಿವಿಗೊಡಬಾರದು ಎಂದರು.
ಹಂಪನಗೌಡ ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.
ಇಬ್ಬರೂ ಒಂದೇ ಪಕ್ಷದಲ್ಲಿದ್ದು ಅನ್ಯೋನ್ಯವಾಗಿವಾಗಿಯೇ ಇದ್ದೇವೆ. ವಿರೋಧ ಪಕ್ಷದವರು ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಎನ್.ಎಸ್.ಬೋಸರಾಜ ಸಚಿವರಿದ್ದು, ಅಭಿವೃದ್ಧಿ ವಿಚಾರಕ್ಕೆ ಭೇಟಿಯಾಗಬೇಕಾಗುತ್ತದೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕನಕ ನಾಲಾ ಯೋಜನೆ ವಿಸ್ತರಣೆಗೆ 134 ಕೋಟಿ ರೂ. ಮಂಜೂರಾಗಿದೆ. ಎಡದಂಡೆ ನಾಲೆಯ ಕ್ರಸ್ಟ್‌ಗೇಟ್ ಮತ್ತಿತರ ಕಾಮಗಾರಿಗೆ 250 ಕೋಟಿ ರೂ. ಮಂಜೂರಾಗಿದೆ. ಎಲ್ಲ ಶಾಸಕರು ಮತ್ತು ಸಚಿವರು ಸೇರಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದರು.
ಪ್ರಮುಖರಾದ ನಲ್ಲಾ ವೆಂಕಟೇಶ್ವರರಾವ್ ಮಲ್ಲದಗುಡ್ಡ, ನಿರುಪಾದೆಪ್ಪ ಗುಡಿಹಾಳ ವಕೀಲ, ಸಿದ್ದನಗೌಡ ಮಾಟೂರು, ಜಿಪಂ ಮಾಜಿ ಸದಸ್ಯ ಹನುಮಂತಪ್ಪ ಮುದ್ದಾಪುರ, ಮಸ್ಕಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶೇಕ್ ಮೆಹಬೂಬ್ ಮುದ್ದಾಪುರಕ್ಯಾಂಪ್ ಇದ್ದರು.