

ಮಂಗಳೂರು: ಹಿಜಾಬ್‌ಗೆ ಸಂಬಂಧಿಸಿ ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ನಗರದ ವಿವಿಧೆಡೆ ಮುಸ್ಲಿಮರ ಅಂಗಡಿಗಳು ಮುಚ್ಚಿದ್ದು, ಮುಸ್ಲಿಂ ಸಮುದಾಯದ ವರ್ತಕರು ಹೆಚ್ಚಿರುವ ಕಡೆಗಳಲ್ಲಿ ಅಘೋಷಿತ ಬಂದ್ ವಾತಾವರಣ ಕಂಡು ಬಂದಿದೆ. ನಗರದ ಮೀನುಗಾರಿಕಾ ಬಂದರು ಹಾಗೂ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಹುತೇಕ ಸ್ಥಬ್ಧವಾಗಿತ್ತು. ಮೀನು ಖರೀದಿಯಿಂದ ಮುಸ್ಲಿಂ ವ್ಯಾಪಾರಿಗಳು ವಿಮುಖರಾಗಿದ್ದರು.
ಗ್ರಾಮೀಣ ಭಾಗದಲ್ಲೂ ಬಹುತೇಕ ಯಥಾಸ್ಥಿತಿಯ ವಾತಾವರಣ ಇತ್ತು. ಅಹಿತಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದರೆ ಹಿಂದುಗಳು ಸೇರಿದಂತೆ ಇತರರ ಅಂಗಡಿಗಳು ತೆರೆದಿದ್ದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ವಾಹನ ಸಂಚಾರವೂ ಎಂದಿನಂತೆ ಇತ್ತು.