

ಮೈಸೂರು: ಶೈಕ್ಷಣಿಕ ಚಟುವಟಿಕೆಗಳ ವಿಸ್ತರಣೆಗಾಗಿ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ರಾಜ್ಯದ 17 ಶಿಕ್ಷಣ, ಪ್ರದರ್ಶಕ ಕಲೆಗಳ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ವಿವಿಧ ಕೋರ್ಸ್‌ಗಳಿಗೆ ಒಡಂಬಡಿಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಸರ್ಟಿಫಿಕೇಟ್, ಡಿಪ್ಲೊಮಾ ಕೋರ್ಸ್, ಪಿಎಚ್.ಡಿ ಸಂಶೋಧನೆ ನಡೆಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಷನ್, ಶ್ರೀರಾಜರಾಜೇಶ್ವರಿ ಕಲಾನಿಕೇತನ್, ಜಯನಗರದ ಕರ್ನಾಟಕ ಭರತಾಗಮ ಪರಿಷತ್, ಕಲಾ ಕದಂಬ ಕೇಂದ್ರ, ನಾಟ್ಯಾಯನ ಟ್ರಸ್ಟ್, ಸೃಷ್ಟಿ ಪ್ರದರ್ಶಕ ಕಲೆ, ನೃತ್ಯ ಸಂಸ್ಥೆ, ಲಕ್ಷ್ಮೀ ನಾರಾಯಣ ಗ್ಲೋಬಲ್ ಸೆಂಟರ್, ಶ್ರೀ ವೆಂಕಟ ಅಕಾಡೆಮಿ ಆಫ್ ಮ್ಯೂಜಿಕ್ ಆ್ಯಂಡ್ ಡಾನ್ಸ್, ಕರ್ನಾಟಕ ಜಾನಪದ ಪರಿಷತ್, ನೆಲಮಂಗಲದ ದಿವ್ಯಜ್ಯೋತಿ ವಿದ್ಯಾಕೇಂದ್ರ, ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರ, ಮಂಗಳೂರಿನ ಸಂದೇಶ್ ಫೌಂಡೇಷನ್ ಫಾರ್ ಕಲ್ಚರ್ ಆ್ಯಂಡ್ ಏಜುಕೇಷನ್, ಮಾಂಡ್ ಮಂದ ಸೊಭಾಣ್, ಹುಬ್ಬಳಿಯ ವಿಜಯನಗರದ ಕಲಾ ಸುಜಯ, ಗುಬ್ಬಿಯ ವಿವೇಕಾನಂದ ವಿದ್ಯಾಪೀಠ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕನಕಪ್ರಿಯಾ ನಾಟ್ಯಕಲಾ ಕೇಂದ್ರ ಟ್ರಸ್ಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರೊಂದಿಗೆ ವಿವಿ ಶೈಕ್ಷಣಿಕ ಚಟುವಟಿಕೆಗಳು ರಾಜ್ಯಾದ್ಯಂತ ವಿಸ್ತರಣೆಗೊಂಡಿದೆ ಎಂದು ಮಾಹಿತಿ ನೀಡಿದರು.
ಒಡಂಬಡಿ ಮಾಡಿಕೊಂಡಿರುವ ಸಂಸ್ಥೆಗಳು ಕೋರ್ಸ್‌ಗಳ ಪ್ರವೇಶಾತಿ, ತರಗತಿ ನಡೆಸುತ್ತವೆ. ವಿವಿಯಿಂದ ಪಠ್ಯಕ್ರಮ, ಪರೀಕ್ಷೆ, ಮೌಲ್ಯಮಾಪನ ನಡೆಯಲಿದೆ. ಸಂಗ್ರಹಿಸಿರುವ ಶುಲ್ಕದಲ್ಲಿ ಶೇ.25ರಷ್ಟು ವಿವಿಗೆ ನೀಡಬೇಕು ಎಂದು ತಿಳಿಸಿದರು.
ಸಂಗೀತ, ತಾಳವಾದ್ಯ, ನೃತ್ಯಕ್ಕೆ ಸಂಬಂಧಪಟ್ಟ ಜೂನಿಯರ್, ಸೀನಿಯರ್, ಪ್ರೀ ವಿದ್ವತ್, ವಿದ್ವತ್ ಪರೀಕ್ಷೆಗಳನ್ನು ಇನ್ಮುಂದೆ ಸಂಗೀತ ವಿವಿಯಿಂದ ನಡೆಸಲಾಗುವುದು. ಇದು 2024ರ ಏಪ್ರಿಲ್, ಮೇನಲ್ಲಿ ಜರುಗಲಿದೆ. ಈ ಪರೀಕ್ಷೆಗಳನ್ನು ಹಿಂದೆ ಪ್ರೌಢ ಶಿಕ್ಷಣ ಮಂಡಳಿ ನಡೆಸುತ್ತಿತ್ತು ಎಂದು ಮಾಹಿತಿ ನೀಡಿದರು.
ಯುಜಿಸಿ ಮಾರ್ಗಸೂಚಿ ಪ್ರಕಾರ ಜನವರಿ ಆವೃತ್ತಿಯಿಂದ ಪಿಎಚ್.ಡಿ ಮತ್ತೆ ಪ್ರಾರಂಭಿಸಲಾಗುವುದು. ವಿವಿಧ ಗೊಂದಲ, ಸಮಸ್ಯೆಗಳಿಂದ ಈ ಹಿಂದೆ ಆರಂಭಗೊಂಡಿದ್ದ ಪಿಎಚ್.ಡಿ ಸ್ಥಗಿತಗೊಂಡಿತ್ತು. ಇದೀಗ 3 ಅಂಗ ಸಂಸ್ಥೆಗಳೊಂದಿಗೆ ಪಿಎಚ್.ಡಿ ಸಂಶೋಧನೆಗೆ ಮರುಚಾಲನೆ ನೀಡಲಾಗಿದೆ ಎಂದರು.
ವಿವಿಯಿಂದ ಮುಂದಿನ ವರ್ಷದಿಂದ ಆನ್‌ಲೈನ್ ಕೋರ್ಸ್ ಸಹ ಪ್ರಾರಂಭಿಸಲಾಗುವುದು. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ವಿವಿಯಲ್ಲಿ ಮೂಲಸೌಕರ್ಯಗಳು ಕೊರತೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕೇವಲ 350 ವಿದ್ಯಾರ್ಥಿಗಳಿಗೆ ಏಕೆ ಬೇಕು ವಿಶ್ವವಿದ್ಯಾಲಯ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇಲ್ಲಿ ಪ್ರತಿ ವಿದ್ಯಾರ್ಥಿಯೂ ಕಲಾವಿದರು. ಹೀಗಾಗಿ, ವಿವಿ ಪ್ರಾಮುಖ್ಯತೆ ಕಡಿಮೆಯಾಗಿಲ್ಲ ಎಂದು ತಿಳಿಸಿದರು.
ನಗರದ ವಲ್ಲಭಭಾಯಿ ಪಟೇಲ್ ಬಡಾವಣೆಯಲ್ಲಿ ಮಂಜೂರಾಗಿರುವ 5 ಎಕರೆ ಜಾಗದಲ್ಲಿ ಸಂಗೀತ ವಿವಿ ಕಟ್ಟಡ ನಿರ್ಮಿಸಲಾಗುವುದು. ಅದಕ್ಕಾಗಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗುತ್ತಿದೆ ಎಂದು ಕುಲಪತಿ ಬೆಟ್ಟಕೋಟೆ ತಿಳಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ಆಡಳಿತಾಧಿಕಾರಿ ರಾಜೇಶ್ ಇದ್ದರು.