ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಎಂ.ಆರ್.ರಾಜೇಶ್ ನಿಧನ

mysore
Published on

ಮೈಸೂರು: ನಗರದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ಎಂ.ಆರ್. ರಾಜೇಶ್(54 ) ಬುಧವಾರ ನಗರದಲ್ಲಿ ನಿಧನರಾದರು.


ವಿಜಯನಗರ 3ನೇ ಹಂತದ ನಿವಾಸಿಯಾದ ಇವರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಕೆಎಎಸ್ ಅಧಿಕಾರಿ ಆಗಿದ್ದ ಇವರು ಕಳೆದ ಸೆಪ್ಟೆಂಬರ್‌ನಲ್ಲಿ ಸಂಗೀತ ವಿವಿ ಆಡಳಿತಾತ್ಮಕ ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದೆ ತೀರ್ಥಹಳ್ಳಿ ತಹಸೀಲ್ದಾರ್, ಮಂಡ್ಯ ಉಪವಿಭಾಗಾಧಿಕಾರಿ, ಚಾಮುಂಡೇಶ್ವರಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ, ಮೈಸೂರಿನಲ್ಲಿ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.

ಸಂಗೀತ ವಿಶ್ವವಿದ್ಯಾಲಯದಲ್ಲಿ ಗುರುವಾರ ಮೃತರಿಗೆ ಸಂತಾಪ ಸಭೆ ನಡೆಸಲಾಯಿತು. ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಎಂ.ಆರ್.ರಾಜೇಶ್ ಕೆಎಎಸ್(ಹಿರಿಯ ಶ್ರೇಣಿ ಅಧಿಕಾರಿ) ನಿಧನಕ್ಕೆ ರಾಜ್ಯ ಸರ್ಕಾರವು ತೀವ್ರ ಸಂತಾಪ ಸೂಚಿಸಿದೆ. ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ(ರಾಜ್ಯ ಶಿಷ್ಠಾಚಾರ) ಕಾರ್ಯದರ್ಶಿ ಎಚ್.ಬಿ.ವಿಜಯಕುಮಾರ್ ಆದೇಶಿಸಿದ್ದಾರೆ.

ಇವರ ಸಹೋದರ ಅಮೆರಿಕದಿಂದ ಆಗಮಿಸುತ್ತಿದ್ದು, ವಿಜಯನಗರದ ಮುಕ್ತಿಧಾಮದಲ್ಲಿ ಮಾ.8ರಂದು ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net