

ವಿಜಯಪುರ: ಸಂಗೀತ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಶವಂತ ಬಡಿಗೇರ ಮಾತನಾಡಿ, 10 ವರ್ಷಗಳಿಂದ ಸಂಗೀತ ಶಿಕ್ಷಕರ ನೇಮಕಾತಿ ಇಲ್ಲದೆ ವಯೋಮಿತಿ ಮೀರುವ ಹಂತದಲ್ಲಿದ್ದು, ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಸಂಗೀತ ಶಿಕ್ಷಕರಿಲ್ಲದೆ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸಂಗೀತ ಶಿಕ್ಷಕರ ಕೊರತೆಯಿಂದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಲು ಬರುತ್ತಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಸರ್ಕಾರ ಆದಷ್ಟು ಬೇಗ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.
ವಿಜಯಪುರ ತಾಲೂಕು ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಕೋಟಿ ಮಾತನಾಡಿ, ಹಲವು ವರ್ಷಗಳಿಂದ ಹೋರಾಟ ಮಾಡಿ ಸರ್ಕಾರದ ಗಮನಕ್ಕೆ ತಂದರೂ ನೇಮಕಾತಿ ವಿಳಂಬವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಶಿವಪ್ಪ ಭಜಂತ್ರಿ, ವಿನಾಯಕ ಕುಲಕರ್ಣಿ, ಮಹೇಶ ಬಂಟನೂರ, ಯಲ್ಲಪ್ಪ ಕೋಟಗುಂಡಿ, ಸುಧಾಕರ ಭಜಂತ್ರಿ, ಆನಂದ ಹೊನವಾಡ, ಶ್ರೀನಿವಾಸ ಕೋಳಿ, ಶೃತಿ ಕ್ವಾಟಿ, ಶೀಲಾ ಬೆನ್ನೂರ ಮತ್ತಿತರರು ಉಪಸ್ಥಿತರಿದ್ದರು.