ಮಹಿಳಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

Published on

ಹುಬ್ಬಳ್ಳಿ: ಇಲ್ಲಿಯ ಎಸ್ ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಡಾ. ಮೂಜಗಂ ಸಭಾಭವನದಲ್ಲಿ ಐಕ್ಯೂಎಸಿ, ಸಂಗೀತ ವಿಭಾಗ ಹಾಗೂ ಅನ್ನರ್ಪೂಣದೇವಿ ಫೌಂಡೇಷನ್ ಸಹಯೋಗದಲ್ಲಿ ಭಾರತದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು ಮತ್ತು ಅಪೂರ್ವಗುರು ಅನ್ನಪೂರ್ಣದೇವಿ ಅವರ ಜೀವನದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನೆ ನೆರವೇರಿಸಿದ ಮುಂಬೈನ ಅಂತಾರಾಷ್ಟ್ರೀಯ ಕೊಳಲು ವಾದಕ ಪಂಡಿತ ನಿತ್ಯಾನಂದ ಹಲ್ದಿಪುರ ಮಾತನಾಡಿ, ಗಾಯಕಿ ಅನ್ನರ್ಪೂಣದೇವಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಭಾರತೀಯ ಸಂಗೀತ ಜಗತ್ತು ಕಂಡ, ಅದರಲ್ಲೂ ಸಿತಾರ್ ಹಾಗೂ ಸುರ್ಬಹಾರ್ ವಾದ್ಯಗಳ ಅತ್ಯುತ್ತಮ ವಾದಕಿಯಾಗಿ ಪ್ರಸಿದ್ಧಿ ಪಡೆದಿದ್ದರು ಎಂದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಅನ್ನರ್ಪೂಣದೇವಿ ಅವರು ಮಧ್ಯಪ್ರದೇಶದ ವೈಹಾರದಲ್ಲಿ ಜನಿಸಿ ಪಂಡಿತ ರವಿಶಂಕರ ಜೋಡಿಯಾಗಿ ಗಾಯನ ಖ್ಯಾತಿ ಗಳಿಸಿದ್ದರು. ಸೀತಾರ ವಾದಕಿಯಾಗಿದ್ದ ಅವರು ಬೀನಕರಿ ಶೈಲಿ ಸಂಗೀತದಲ್ಲಿಯೂ ನಿಪುಣತೆ ಹೊಂದಿದ್ದರು. ತಮ್ಮ ಜೀವಿತಾವಧಿಯಲ್ಲಿ ಸಂಗೀತ ಕಲಿಯುವ ತಮ್ಮ ಶಿಷ್ಯರಿಂದ ಯಾವುದೇ ಶುಲ್ಕ ಪಡೆಯದೇ ಸಂಗೀತ ಪಾಠ ಬೋಧಿಸಿದ್ದ ಮಹಾನ್ ಸಂಗೀತಗಾರ್ತಿ. ಹೀಗಾಗಿ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಕಾರ್ಯಾಗಾರ ಸಂಗೀತ ಅಭ್ಯಾಸಿಗಳಿಗೆ ಮಹತ್ವದ್ದಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ -ಧಾರವಾಡ, ಶಿರಸಿ, ಗದಗ, ಬಾಗಲಕೋಟ, ವಿಜಯಪುರ, ಹಂಪಿ- ಹೊಸಪೇಟೆಯ ವಿವಿಧ ಕಾಲೇಜುಗಳ 120 ಪ್ರಾಧ್ಯಾಪಕರು, ಸಂಗೀತ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಂಗೀತ ಆಸಕ್ತರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.

ಎಸ್ ಜೆಎಂವಿ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿದ್ದರು.

ವೈಭವ ಭಟ್, ಪಂಡಿತ ಇನಾಂದಾರ, ಧಾರವಾಡ ಘರಾಣೆ ಖ್ಯಾತಿಯ ಸಿತಾರ ವಾದಕ ಉಸ್ತಾದ ಹಫಿಜ್ ಖಾನ್ ಹಾಗೂ ಎಸ್ಜೆಎಂವಿ ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಕಳಸರಾಯ, ಮುರುಗೇಶ ಯಕಲಾಸಪುರ, ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸಿಸಿಲಿಯಾ ಡಿ'ಕ್ರೂಜ್, ಐಕ್ಯೂಎಸಿ ಸಂಯೋಜಕ ಪ್ರೊ. ಶಿವಕುಮಾರ ಬನ್ನಿಹಟ್ಟಿ ಭಾಗವಹಿಸಲಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ಪ್ರಸ್ತುತಪಡಿಸಿದರು. ಸ್ನಾತಕೋತರ ಸಂಗೀತ ವಿಭಾಗದ ಸಂಯೋಜಕಿ ಡಾ. ಜ್ಯೋತಿಲಕ್ಷ್ಮೀ ಡಿ.ಪಿ. ಸ್ವಾಗತಿಸಿದರು. ಡಾ. ಶಿವಲೀಲಾ ವೈಜನಾಥ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶಿವಕುಮಾರ ಪ್ರಭಯ್ಯನವರಮಠ ವಂದಿಸಿದರು. ಶ್ವೇತಾ ಕಾಗೇನವರ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net