

ಹುಬ್ಬಳ್ಳಿ: ಸಾತ್ವಿಕ ಆಹಾರ ಸೇವನೆ, ನಿರಂತರ ಯೋಗ ವ್ಯಾಯಾಮ ಮತ್ತು ಉತ್ತಮ ಸಂಗೀತ ಆಲಿಸುವಿಕೆಯಿಂದ ಬಹುತೇಕ ರೋಗಗಳಿಂದ ದೂರವಿರಬಹುದು ಮತ್ತು ನೆಮ್ಮದಿ ಆರೋಗ್ಯಯುತ ಜೀವನ ನಡೆಸಬಹುದು ಎಂದು ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಹೇಳಿದರು.
ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ನಾದ ಹಿಂದೂಸ್ತಾನಿ ಸಂಗೀತ ಕಲಾವಿದರ ವೇದಿಕೆಯ ವಾರ್ಷಿಕೋತ್ಸವದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಸಂಗೀತ ಕಲಿಯುವುದು, ಉತ್ತಮ ಸಂಗೀತವನ್ನು ಆಲಿಸುವುದರಿಂದ ಮನಸ್ಸು ಸದಾ ಪ್ರಪುಲ್ಲತೆಯಿಂದ ಕೂಡಿರುತ್ತದೆ. ನನ್ನ ವೈದ್ಯಕಿಯ ಜೀವನದಲ್ಲಿ ಇದು ಅನುಭವಕ್ಕೆ ಬಂದಿದೆ ಎಂದರು.
ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಗುರುದೇವಾಚರಣಾನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಸಂಭಾಜಿ ಕಲಾಲ ಭಾಗವಹಿಸಿದ್ದರು.
ನಾದ ವೇದಿಕೆಯ ಸದಸ್ಯರಾದ ವಿಶ್ವೇಶ್ವರಯ್ಯ ಚೌಕಿಮಠ ಅವರ ಕೊಳಲು ವಾದನ, ಮಲ್ಲಿಕಾರ್ಜುನ ಚೌಕಿಮಠ, ಸಚಿನ ಪೂಜಾರಿ, ಅನ್ನಪೂರ್ಣ ಛಬ್ಬಿ, ಮಂಜುನಾಥ ದೊಡ್ಡಮನಿ, ಮುರುಗೇಶ ಅಂಗಡಿ, ಡಾ. ಶ್ರೀಕಾಂತ ಕೋನಾಪುರ, ಶಿವಸ್ವಾಮಿ ಹಿರೇಮಠ, ದಿನೇಶಗೌಡ, ನಿಜಗುಣ ಮಂಗಿ, ಪ್ರೇಮಕೃಷ್ಣ ಮೇಟಿ ಹಾಗೂ ಆಹ್ವಾನಿತ ಕಲಾವಿದರಾದ ಬಸವರಾಜ ಹಿರೇಮಠ ಅವರು ಸಂಗೀತ ಕಾರ್ಯಕ್ರಮ ನೀಡಿದರು.
ಕುಮಾರ ಗುರುಪ್ರಸಾದ ಛಬ್ಬಿ ಪ್ರಾರ್ಥನೆ ಹಾಡಿದರು. ಡಾ. ನಾಗಲಿಂಗ ಮುರಗಿ, ಶಿವಕುಮಾರ ಅರ್ಕಸಾಲಿ ತಬಲಾ ಸಾಥ್ ನೀಡಿದರು.
ಪ್ರಶಾಂತ ಮೊಟಗಿ, ನಾರಾಯಣ ಭಂಡಾರಿ, ನಾಗರಾಜ ಬಡಿಗೇರ, ಹನುಮಂತ ತೆಗ್ಗಿಮನಿ, ಸಂಗಪ್ಪ ಕೋರಿ, ಆಶ್ರಮದ ಭಕ್ತರು ಉಪಸ್ಥಿತರಿದ್ದರು.