

ನಗರದ ಸದ್ವಿದ್ಯಾ ಶಾಲೆಯ ಟಿ.ಪಿ.ಕೈಲಾಸಂ ರಂಗ ಮಂಟಪದಲ್ಲಿ ಗುರುವಾರ ಸಂಜೆ ದಾಸವಾಣಿ, ಭಾವಗೀತೆ ಹಾಗೂ ಸುಗಮ ಸಂಗೀತದ ಮಧುರ ಅಲೆಗಳು ತೇಲಿ ಬಂದವು.
ರಾಮೋತ್ಸವದ ಅಂಗವಾಗಿ ಶ್ರೀ ವೀರಾಂಜನೇಯಸ್ವಾಮಿ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮ ಸಂಗೀತ ಕಂಪು ಚೆಲ್ಲುವಲ್ಲಿ ಯಶಸ್ವಿಯಾಯಿತು.
ಗಾಯಕರಾದ ಉಪ್ಪುಂದ ರಾಜೇಶ್ ಪಡಿಯಾರ್, ಸಿ.ಎಸ್.ವೇದಶ್ರೀ ಮತ್ತು ತಂಡ ಪ್ರಸ್ತುತಪಡಿಸಿದ ‘ಸಂಗೀತ ಕಾರ್ಯಕ್ರಮಕ್ಕೆ’ ಸಭೀಕರ ಮನಸೂರೆಗೊಳಿಸಿತು. ಇವರಿಬ್ಬರ ಕಂಠಸಿರಿಯಿಂದ ಮೂಡಿಬಂದ ಗಾಯನ ಕೇಳುಗರ ಮನತಣಿಸಿತು.
ಸಿ.ಎಸ್.ವೇದಶ್ರೀ ಅವರು ‘ನಿನ್ನ ಕಂಗಳ ಕೊಳದಿ ಬೆಳದಿಂಗಳಿದ್ದಂತೆ, ನನ್ನೆದೆಯ ಕಡಲೇಕೆ ಬೀಗುತಿಹುದು’, ‘ಕರುನಾಳು ಬಾ ಬೆಳಕೆ ಮುಸುಕಿದಿ ಮಬ್ಬಿನಲಿ’, ‘ಅಮ್ಮ ಎಂಬ ಮಾತಿಗಿಂತ, ಬೇರೆ ಮಂತ್ರ ಎಲ್ಲಿದೆ’ ಇತರೆ ಹಾಡುಗಳನ್ನು ಇಂಪಾಗಿ ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಉಪ್ಪುಂದ ರಾಜೇಶ್ ಪಡಿಯಾರ್ ಅವರು ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೇ ಬಾರಿಸದಿರು ತಂಬೂರಿ’, ‘ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಭಾವಗೀತೆ ಹಾಡುವ ಮೂಲಕ ಎಲ್ಲರ ಮನಗೆದ್ದರು.
ಇವರಿಗೆ ಗಣೇಶ್ ಭಟ್(ಕೀಬೋರ್ಡ್), ಪುನೀತ್(ಕೊಳಲು), ರಮೇಶ್ ಧನ್ನೂರ್(ತಬಲ) ಹಾಗೂ ಕಿರಣ್(ರಿದಂಪ್ಯಾಡ್) ಸಾಥ್ ನೀಡಿದರು.
ಏ. 18ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಸಂಗೀತ ಕಛೇರಿ ನೀಡಲಿದ್ದಾರೆ. ಅವರಿಗೆ ವಿದ್ವಾನ್ ಸಿ.ಎನ್.ಚಂದ್ರಶೇಖರ್(ಪಿಟೀಲು), ವಿದ್ವಾನ್ ಜಿ.ಎಸ್.ರಾಮಾನುಜನ್(ಮೃದಂಗ), ವಿದ್ವಾನ್ ರಾಮಾನುಜನ್(ಮೋರ್ಚಿಂಗ್) ಸಹಕಾರ ನೀಡಲಿದ್ದಾರೆ.