ಧಾರವಾಡ ಮಣ್ಣಿನಲ್ಲೇ ಅಡಗಿದೆ ಸಂಗೀತ, ಸಾಹಿತ್ಯ

16 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಮಣ್ಣು, ಗಾಳಿಯಲ್ಲಿ ಸಂಗೀತ, ಸಾಹಿತ್ಯ, ಕಲೆ ಅಡಗಿದೆ. ಎಲ್ಲ ಸಂಗೀತ ಕಲಾವಿದರನ್ನು ಸೆಳೆಯುವ ಸ್ವಭಾವ ಧಾರವಾಡದ ಮಣ್ಣಿಗೆ ಇದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದ ಪರ್ವಿನ್ ಬೇಗಂ ಸ್ಮೃತಿ ಸಂಗೀತ ಮತ್ತು ಶಿಕ್ಷಣ ಟ್ರಸ್ಟ್​ ವತಿಯಿಂದ ಪರ್ವಿನ್ ಬೇಗಂ, ಉಸ್ತಾದ್​ ಅಬ್ದುಲ್​ ಖಾದರ್​ ಖಾನ್​ ಹಾಗೂ ಪಂ.ಬಸವರಾಜ ಬೆಂಡಿಗೇರಿ ಸ್ಮರಣಾರ್ಥ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಣೇಶ ಅಮೀನಗಡ, ಡಾ.ಸಿ.ಬಿ.ಚಿಲ್ಕರಾಗಿ ರಚಿಸಿದ ಉಸ್ತಾದ್​ ಫಯಾಜ್​ ಖಾನ್​ ಜೀವನಕಥನ "ಸಾರಂಗಿ ನಾದದ ಬೆನ್ನೇರಿ' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಗೀತಗಾರರು ಧಾರವಾಡಕ್ಕೆ ಆಗಮಿಸಿ ತಪಸ್ಸು ಮಾಡಿ ಸಂಗೀತ ಕ್ಷೇತ್ರದಲ್ಲಿ ತಾವು ಸಾಧನೆ ಮಾಡಿದ್ದಲ್ಲದೆ, ನಗರದ ಹೆಸರನ್ನೂ ಬೆಳೆಸಿದ್ದಾರೆ. ನಮ್ಮ ದೇಶದಲ್ಲಿನ ರಾಜಶ್ರಯದ ಬಳಿಕ ಕಲಾವಿದರ ಬದುಕು ಸಾಕಷ್ಟು ಕಷ್ಟದಲ್ಲಿತ್ತು. ಆಗಲೂ ಕಲಾವಿದರು ಸಂಗೀತವನ್ನು ತಮ್ಮ ಕುಟುಂಬಕ್ಕೆ ಧಾರೆ ಎರೆದಿದ್ದನ್ನು ಗಮನಿಸಿದರೆ ಸಂಗೀತದ ಮೇಲೆ ಹೊಂದಿದ್ದ ಆಸಕ್ತಿ, ಶ್ರದ್ಧೆ ತೋರುತ್ತದೆ ಎಂದರು.

ಕಲಾವಿದರಿಗೆ ಅಹಂ ಬಂದರೆ ಕಲಿಕೆ ನಿಲ್ಲಲಿದೆ. ಯುವ ಕಲಾವಿದರು ಎಷ್ಟೇ ಸಾಧನೆ ಮಾಡಿದ್ದರೂ ಹಿರಿಯರಿಂದ ಕಲಿಯುವುದು ಸಾಕಷ್ಟಿದೆ. ಇಂತಹ ಸಾವಿರಾರು ಯುವ ಕಲಾವಿದರಿಗೆ ಫಯಾಜ್​ ಖಾನ್​ ಮಾರ್ಗದರ್ಶನ ಅಗತ್ಯವಾಗಿದೆ. ಕಲಾವಿದರ ಜೀವನ, ಸಹ ಕಲಾವಿದರೊಂದಿಗೆ ನಡೆದುಕೊಳ್ಳುವ ರೀತಿ, ಜೀವನ ಶೈಲಿ, ಹೀಗೆ ಹತ್ತು ಹಲವು ಗುಣಗಳಿಂದಲೇ ಸಂಗೀಕ್ಷ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಫಯಾಜ್​ಖಾನ್​ ಧಾರವಾಡದ ಮಾಣಿಕ್ಯ ಇದ್ದಂತೆ. ಸಂಗೀತದ ಎಲ್ಲ ವಿಭಾಗಗಳಲ್ಲಿ ಸಾಧನೆ ಮಾಡಿದ ಕಲಾವಿದ ಉಸ್ತಾದ್​ ಫಯಾಜ್​ಖಾನ್​. ಇಂತಹ ಶ್ರೇಷ್ಠ ಕಲಾವಿದರ ಕುರಿತ ಜೀವನಕಥನ ಪುಸ್ತಕವನ್ನು ಎಲ್ಲರೂ ಓದಬೇಕು. ಇದು ಕಲಾವಿದರಿಗೆ ಪ್ರೇರಣೆ ನೀಡಲಿದೆ ಎಂದರು.

ವಯಲಿನ್​ ವಾದಕ ಪಂ.ಬಿ.ಎಸ್​.ಮಠ, ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಸಿ.ಯು.ಬೆಳ್ಳಕ್ಕಿ, ಡಾ. ಸೌಭಾಗ್ಯ ಕುಲಕರ್ಣಿ, ಉಸ್ತಾದ್​ ಫಯಾಜ್​ ಖಾನ್​, ಗಣೇಶ ಅಮೀನಗಡ, ಡಾ.ಸಿ.ಬಿ. ಚಿಲ್ಕರಾಗಿ, ಟ್ರಸ್ಟ್​ ಪದಾಧಿಕಾರಿಗಳು, ಇತರರು ಇದ್ದರು.

ನಂತರ ಭಾರ್ಗವ ಕುಲಕರ್ಣಿ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು. ಸಹ ಕಲಾವಿದರಾಗಿ ಶ್ರೀಹರಿ ದಿಗ್ಗಾವಿ, ಸರ್ಫರಾಜ್​ ಖಾನ್​ ಸಾಥ್​ ನೀಡಿದರು. ಉಸ್ತಾದ್​ ದಿಲ್​ಶಾದ್​ ಖಾನ್​ ಸಾರಂಗಿ ವಾದನಕ್ಕೆ ಪಂ.ರವೀಂದ್ರ ಯಾವಗಲ್​ ತಬಲಾ ಸಾಥ್​ ನೀಡಿದರು. ಬಳಿಕ ಪಂ. ಧನಂಜಯ ಹೆಗಡೆ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು. ಅವರಿಗೆ ಉಸ್ತಾದ್​ ನಿಸಾರ್​ ಅಹ್ಮದ್​ ಹಾಗೂ ಸರ್ಫರಾಜ್​ ಖಾನ್​ ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net