

ಕುಂಬಳೆ: ಸಂಗೀತ ಭಗವಂತ ಹಾಗೂ ಭಕ್ತನನ್ನು ಹೆಣೆಯುವ ಅತ್ಯುತ್ತಮ ಮಾಧ್ಯಮ. ಸಂಗೀತದಲ್ಲಿರುವ ಮಾಧುರ್ಯ ಹಾಗೂ ಆಕೃತಿಯಲ್ಲಿ ಹುದುಗಿರುವ ಸಾಹಿತ್ಯದ ಸೌಂದರ್ಯವು ಪವಾಡಸದೃಶವಾಗಿ ಕಾರ್ಯವೆಸಗಿ ಕಲಾವಿದನ ಹಾಗೂ ಕೇಳುಗನ ಮನದಾಳದಲ್ಲಿ ಭಗವಂತನ ಕುರಿತಾದ ಪೂಜ್ಯ ಭಾವನೆ ಬಿಂಬಿಸುತ್ತದೆ ಎಂದು ನಟ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳಿದರು.
ಕಾಸರಗೋಡಿನ ರಂಗಚಿನ್ನಾರಿ ಸಾರಥ್ಯದಲ್ಲಿ ಸ್ಥಳೀಯ ಭಕ್ತಿರಸ ಸಮಿತಿ ಸಹಯೋಗದಲ್ಲಿ, ಗಾಯಕ ಶಂಕರ ಶಾನುಭೋಗ್ ಕಳಸ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಣಿಪುರ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಮಾಧವ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಹಿಂದೂಸ್ಥಾನಿ ಗಾಯಕಿ ಶಾಂತೇರಿ ಕಾಮತ್ ಭಾಗವಹಿಸಿದ್ದರು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಸಿದರು. ಪ್ರೇಮಾ ಶೆಟ್ಟಿ ವಂದಿಸಿದರು. ವೈಭವಿ ಶಂನಾಡಿಗ ಪ್ರಾರ್ಥಿಸಿದರು. ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು, ದಕ್ಷಿಣಕನ್ನಡ ಜಿಲ್ಲೆ, ಭಟ್ಕಳದಿಂದಲೂ 650ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಶಿಬಿರಾರ್ಥಿಗಳು ಭಾಗವಹಿಸಿದ್ದರು.