ಸಂಗೀತ ಬದುಕಿನ ದಿವ್ಯಜ್ಯೋತಿ

13 vikram 12
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಹಾಗೂ ಲಲಿತ ಕಲೆಗಳು ಬದುಕಿನ ದಿವ್ಯಜ್ಯೋತಿಗಳಾಗಿದ್ದು, ಇಂದು ಸಮಾಜಕ್ಕೆ ಸಂಗೀತದ ಗಾಯನ, ವಾದನ, ನೃತ್ಯ ಇವುಗಳೊಂದಿಗೆ ಮಾನವನಿಗೆ ಮತ್ತು ಸಮಾಜಕ್ಕೆ ಆರೋಗ್ಯಯುತವಾಗಿ ಆದರ್ಶವಾಗಿವೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ರಾಜೇಂದ್ರ ನಾಯಕ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಲಲಿತ ಕಲಾ ಹಾಗೂ ಸಂಗೀತ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿಪಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತದ ಬಿ.ಮ್ಯೂಸಿಕ್​ ಪದವಿ ಈಗ ಬಿಪಿಎ (ಬ್ಯಾಚುಲರ್​ ಆಫ್ ​ ಪರ್ಫಾರ್ಮಿಂಗ್ ಆರ್ಟ್ಸ್​) ಪದವಿಯಾಗಿ ಮಾರ್ಪಾಡಾಗಿದೆ. ಈ ಪದವಿಯು ಗಾಯನ, ವಾದನ, ನೃತ್ಯ ವಿಷಯಗಳ ಸಮೂಹವಾಗಿದ್ದು, ವಿದ್ಯಾರ್ಥಿಗಳು ಶ್ರದ್ಧೆ, ಅಭ್ಯಾಸ ಮತ್ತು ಸತತ ಪರಿಶ್ರಮದಿಂದ ಜೀವನವನ್ನು ತಾವೇ ರೂಪಿಸಿಕೊಳ್ಳಬಹುದು. ಇಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯಿಂದ ಉದ್ಭವಿಸಿದೆ. ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ನೃತ್ಯ, ಲಲಿತ ಕಲೆಗಳು, ಯೋಗ, ಚಿತ್ರಕಲೆ ಇವು ನಮಗೆ ಎದುರಾಗುವ ಅಡೆತಡೆಗಳನ್ನು ದಾಟಿ ಬದುಕಲು ದಾರಿಗಳಾಗಿವೆ ಎಂದರು.
ಪ್ರೊ. ಎ.ಬಿ. ಬಿಜಾಪುರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಮೃತ್ಯುಂಜಯ ಅಗಡಿ ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಗುರಿ ಹಾಗೂ ಗುರು ಮುಖ್ಯ. ಸಂಗೀತ, ಸಾಹಿತ್ಯ, ಜನಪದ, ಲಲಿತಕಲೆಗಳ ಎಲ್ಲ ಪ್ರಕಾರಗಳು ನಮ್ಮ ರಾಜ್ಯ ಹಾಗೂ ರಾಷ್ಟ್ರದ ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿವೆ ಎಂದರು.
ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಡಾ. ವೀಣಾ ಬಡಿಗೇರ ಸ್ವಾಗತಿಸಿದರು. ಡಾ. ಅನೀಲ ಮೇತ್ರಿ ನಿರೂಪಿಸಿದರು. ಡಾ. ಪರಶುರಾಮ ಕಟ್ಟಿಸಂಗಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net