ಸಂಗೀತ ನಮ್ಮ ಬದುಕಿನ ಸಂಜೀವಿನಿ

18 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂಗೀತ ನಮ್ಮ ಬದುಕಿನ ಸಂಜೀವಿನಿ. ಆದರೆ ಭಾವನೆಗಳನ್ನು ಅರಳಿಸಿ ದುಖಃ, ಖಿನ್ನತೆ ದೂರ ಮಾಡಿ, ಮನೋಲ್ಲಾಸ ಉಂಟು ಮಾಡುವ ಶಕ್ತಿ ಇದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಹೇಶ ಹೊರಕೇರಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸುಶೀಲಾ ಮಲ್ಲೇಶಪ್ಪ ಅಪ್ಪಾಜಿ ದತ್ತಿ ನಿಮಿತ್ತ ಬೆಳಗಾವಿಯ ರುದ್ರಾಂಬಿಕಾ ಮಹಾಂತೇಶ ಯಾಳಗಿ ಅವರಿಂದ ಏರ್ಪಡಿಸಿದ್ದ ಜಾನಪದ ಮತ್ತು ವಚನ ಗಾಯನ ಕಾಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಕೇಳುವುದರಿಂದ ಹಲವು ರೋಗಗಳು ನಿವಾರಣೆಯಾಗಲಿವೆ. ಸಂಗೀತಕ್ಕೆ ಒಲಿಯದ ಮನಸ್ಸುಗಳೇ ಇಲ್ಲ. ವಿಶೇಷವಾಗಿ ನಮ್ಮ ಜನಪದ ಹಾಡುಗಳಂತೂ ಭಾವಮಯವಾದ ಹಾಡುಗಳಾಗಿರುವುದರಿಂದ ಕೇಳುಗರ ಮನಸ್ಸಿನ ಬೇಸರ, ಜಡತ್ವ ತೊಲಗಿಸಿ ಮನರಂಜನೆ ನೀಡುತ್ತವೆ. ಯುವ ಶಕ್ತಿ ಜಾನಪದ ಹಾಡುಗಾರಿಕೆ ಪರಂಪರೆಯಿಂದ ವಿಮುಖರಾಗಬಾರದು ಎಂದರು.

ವೀರಣ್ಣ ಒಡ್ಡೀನ ಮಾತನಾಡಿ, ಸುಶೀಲಾ ಅಪ್ಪಾಜಿ ಅವರು ಹೆಚ್ಚು ಓದದಿದ್ದರೂ ಅಪಾರ ಲೋಕಾನುಭವ ಹೊಂದಿದ್ದರು. ಸಂಗೀತ ಪ್ರೇಮಿಯಾದ ಅವರು ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು.

ಬೆಳಗಾವಿಯ ರುದ್ರಾಂಬಿಕಾ ಯಾಳಗಿ ಜಾನಪದ ಹಾಡು ಪ್ರಸ್ತುತಪಡಿಸಿದರು. ಜಿತೇಂದ್ರ ಬಣ್ಣವರ್​ ತಬಲಾ ಸಾಥ್​ ನೀಡಿದರು. ಲೀಲಾ ಕಲಕೋಟಿ, ದೇಸಾಯಿಗೌಡ ಪಾಟೀಲ, ಇತರರು ಇದ್ದರು.

ಶಂಕರ ಕುಂಬಿ ನಿರೂಪಿಸಿದರು. ಮಂಜುಳಾ ಕಟ್ಟಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net