

ಬೆಂಗಳೂರು: ಸಂಗೀತ ಮತ್ತು ನೃತ್ಯಗಳು ನಮ್ಮ ಮೈಮನಸಿಗೆ ಔಷಧವಿದ್ದಂತೆ ಎಂದು ಹಿರಿಯ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದ್ದಾರೆ.
ಪಂಡಿತ್ ಬಸವರಾಜ ಬೆಂಡಿಗೇರಿ ಸ್ಮರಣಾರ್ಥ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ಆಯೋಜಿಸಿದ್ದ ‘ಚೈತ್ರ ಸಂಗೀತೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಪ್ರತಿನಿತ್ಯ ಒಂದು ಗಂಟೆ ಸಂಗೀತ ಕೇಳುತ್ತೇನೆ. ಹೃದಯ ಲಯಬದ್ಧವಾಗಿ ಬಡಿದರೆ ಶ್ರುತಿಬದ್ಧವಾಗಿ ನಮ್ಮ ಉಸಿರಾಟ ಇರುತ್ತೆ. ಹೀಗೆ ನಾವು ಸದಾ ಸಂಗೀತದ ಜೊತೆಗೆ ಇರುತ್ತೇವೆ ಎಂದರು.
ಹಿರಿಯ ನಟ ಡಾ. ಶ್ರೀಧರ್ ಮಾತನಾಡಿ, ನಾನು 30-40 ವರ್ಷಗಳಿಂದ ಡಾ.ಸಿ.ಆರ್. ಚಂದ್ರಶೇಖರ್ ಪುಸ್ತಕಗಳನ್ನು ಓದುತ್ತ ಅವರನ್ನು ಹಿಂಬಾಲಿಸುತ್ತ ಬಂದಿದ್ದೇನೆ. ಹಾಗಾಗಿ ನಾನು ಕೂಡ ಪರೋಕ್ಷವಾಗಿ ವಿದ್ಯಾರ್ಥಿಯೇ. ಹಂಪಿಹೊಳಿಯರು ಸಂಘಟನಾ ಚತುರ ಎಂದರು.
ಕಾರ್ಯಕ್ರಮದಲ್ಲಿ ಕಥಕ್ ಕಲಾವಿದರಾದ ಮುರಳಿ ಮೋಹನ್ ಕಲ್ವಕಲ್ವ ದಂಪತಿಗೆ ‘ಗುರುಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದೇ ವೇಳೆ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್‌ನ ಯೂಟ್ಯೂಬ್ ಚಾನಲ್ಗೆ ಚಾಲನೆ ನೀಡಲಾಯಿತು. ಗಾಯಕ ಡಾ. ಮೃತ್ಯುಂಜಯ, ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಕಾಂತಿ ಸ್ವೀಟ್ಸ್‌ನ ಸಹ ಸ್ಥಾಪಕಿ ಉಷಾದೇವಿ, ಗಾಯಕರದ ನಾಗೇಂದ್ರ ರಾಣಾಪುರ್, ಅಮಿತ್ ಭಟ್ ಉಪಸ್ಥಿತರಿದ್ದರು.