

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾವ್ಯಕ್ಕಿರುವಷ್ಟೇ ಮಹತ್ವ ಸಂಗೀತಕ್ಕಿದೆ. ಸಂಗೀತವನ್ನು ಭಾವಪೂರ್ಣವಾಗಿ ಹಾಡಬೇಕು ಎಂದು ಹಿರಿಯ ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪ ಬುಧವಾರ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವ್ಯ ಮತ್ತು ಸಂಗೀತ ಸಮ್ಮಿಳಿತಗೊಂಡಾಗ ಅದರ ಪರಿಣಾಮ ಮತ್ತು ಪ್ರಭಾವ ಅತ್ಯಂತ ಹೆಚ್ಚು ರಸಾನುಭೂತಿ ತಂದುಕೊಡುತ್ತದೆ. ಹಿರಿಯ ಸಂಗೀತಗಾರರೆಲ್ಲ ಸಭಾ ಗೌರವದೊಂದಿಗೆ ವಿಚಾರ ಮಾಡಿ ಹಾಡುತ್ತಿದ್ದರು. ಭಾರತೀಯ ಸಂಗೀತದ ಯಾವುದೇ ಪ್ರಕಾರಕ್ಕೂ ಒಂದು ಮಾಂತ್ರಿಕತೆ ಇದೆ. ಶಬ್ದಗಳಿಗೆ, ಅಕ್ಷರಗಳಿಗೆ ತನ್ನದೇ ಆದ ಬಣ್ಣ, ಭಾವ ರಸವಿದೆ. ಗುರುಗಳು ಕಲಿಸಿದ ಅಂಶಗಳನ್ನು ಇಂದಿನ ಯುವ ಸಂಗೀತಗಾರರು ತಮ್ಮ ಸಂಗೀತ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಪುರಸ್ಕೃತ ಪಂ. ವಾದಿರಾಜ ನಿಂಬರಗಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಹಿರಿಯ ಸಂಗೀತ ಕಲಾವಿದ ಪಂ. ಶ್ರೀಕಾಂತ ಕುಲಕರ್ಣಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿ ಅನಿಲ ಮೇತ್ರಿ ಸಾಥ್ ನೀಡಿದರು.
ಸುನೀತಾ ವಾಸರದ, ಮೇಘಾ ಹುಕ್ಕೇರಿ, ಖೈರುನ್ನಿಸಾ, ಗಿರಿಜಾ ಶೆಕ್ಕಿ, ಇಂದಿರಾ ಜಾತಿಕರ್ತ, ವಿಜಯಾ ದಡೂತಿ, ಜ್ಯೋತಿ, ಅನಿಲಕುಮಾರ, ಎಂ.ಎಂ. ಚಿಕ್ಕಮಠ, ಸುನಿತಾ ತಪಶೆಟ್ಟಿ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.