

ಚಿಕ್ಕಮಗಳೂರು: ಸಂಗೀತ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವ ವಿಶಿಷ್ಟ ಪ್ರಕಾರವಾಗಿದ್ದು, ಇದಕ್ಕೊಂದು ದೃಢವಾದ ಧ್ಯೇಯವಿದೆ. ಆ ಧ್ಯೇಯದಿಂದ ಹೊಸ ಕಲಾವಿದರು ಪ್ರೋತ್ಸಾಹ ಪಡೆಯುತ್ತಿದ್ದಾರೆ ಎಂದು ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುಗಮ ಸಂಗೀತ ಗಂಗಾ, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕದಮನೆ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಆಶ್ರಯದಲ್ಲಿ `ಪೂರ್ವಿ ಗಾನಯಾನ ೧೦೦ರ ಪ್ರಯುಕ್ತ ಆಯೋಜಿಸಿದ್ದ ನಮ್ಮ ಹಾಡು ನಮ್ಮದು ಚಿತ್ರಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಗೀತಕ್ಕೆ ಸಾಧನೆ ಬೇಕು. ಪರಿಶ್ರಮ ಬೇಕು. ಪೂರ್ವ ಜನ್ಮದ ಸಂಸ್ಕಾರ ಬೇಕು. ಇವೆಲ್ಲಾ ಇದ್ದವರು ಮಾತ್ರ ಸಾಧನೆ ಮಾಡಲು ಸಾಧ್ಯ. ಸಂಗೀತ ಕಾರ್ಯಕ್ರಮದ ಆಯೋಜನೆಯ ಸಡಗರ, ಸಂಭ್ರಮ, ಸಂಪ್ರದಾಯ ಖುಷಿಗೋ, ಸಂತೋಷಕ್ಕೋ ಸೀಮಿತವಾದುದಲ್ಲ. ಸಂಗೀತ ನಮ್ಮೆಲ್ಲರ ಬದುಕಲ್ಲಿ ಶಾಶ್ವತವಾಗಿರುವ ಒಂದು ದೊಡ್ಡ ಮಾಧ್ಯಮವಾಗಿದೆ. ಈ ಪರಂಪರೆ ಮುಂದುವರಿಯಬೇಕು. ಇದನ್ನು ಎಲ್ಲರಿಗೂ ಹಂಚಬೇಕು ಎಂದರು.
ನಮ್ಮ ಜೀವನದ ಜೊತೆ ಜೊತೆಯಲ್ಲೇ ಸಂಗೀತ ಇದೆ. ಪುಟ್ಟ ಮಕ್ಕಳಾಗಿದ್ದಾಗ ಅಮ್ಮನ ಲಾಲಿ ಜೋಗುಳ ಕೇಳಿದ್ದೀವಿ. ನಾವು ದೊಡ್ಡವರಾಗುತ್ತಾ ನಾವೇ ಸಂಗೀತ ಕಲಿಯುತ್ತೇವೆ. ಇಲ್ಲವೆ ಕಲಿತವರನ್ನು ನೋಡಿ ಆನಂದಪಡುತ್ತೇವೆ. ಹೀಗಾಗಿ ಸಂಗೀತ ನಮಗೆ ಹೊಸದಲ್ಲವೇ ಅಲ್ಲ. ಮಾತ್ರವಲ್ಲ ಸಂಗೀತ ಯಾರಿಗೂ ಬೇಡ ಎಂದೆನ್ನಿಸಿಯೇ ಇಲ್ಲ ಎಂದು ಹೇಳಿದರು.
ಸಂಗೀತ ಪ್ರಕೃತಿಯಲ್ಲೇ ಇದೆ. ಬೀಸುವ ಗಾಳಿ, ಸಮುದ್ರದ ಅಲೆ, ಹಕ್ಕಿಗಳ ಚಿಲಿಪಿಲಿ, ಮಾನವನ ಹೃದಯದ ಬಡಿತದಲ್ಲಿ ಸಂಗೀತದ ನಾದ ಇದೆ. ಸಂಗೀತದಲ್ಲಿ ಒಂದು ಲಯ, ಒಂದು ರಾಗ, ಒಂದು ಶ್ರುತಿ ಇದೆ. ಹಾಗಾಗಿ ಇದುವರೆಗೆ ಯಾರೂ ಅದನ್ನು ತಿರಸ್ಕರಿಸಿಯೇ ಇಲ್ಲ. ಸಂಗೀತ ಪ್ರಕೃತಿಯಲ್ಲಿ ಇರುವುದಷ್ಟೇ ಅಲ್ಲ. ಪಾಂಡಿತ್ಯ ಹೊಂದಿದವರು ರಾಗದಲ್ಲಿ ದೀಪ ಬೆಳಗಿಸಿದ್ದಾರೆ. ಮಳೆ ಬರಿಸಿದ್ದಾರೆ. ಇತ್ತೀಚೆಗೆ ಗುಣ ಆಗದಿರುವ ಕಾಯಿಲೆಯನ್ನು ಕೂಡ ಸಂಗೀತದಲ್ಲಿ ಗುಣಪಡಿಸಬಹುದು ಎನ್ನುವ ಥೆರಪಿಯ ಮೂಲಕ ನಿರೂಪಿಸಿರುವ ನಿದರ್ಶನವಿದೆ. ಎಷ್ಟೋ ರೈತರು ತಮ್ಮ ತೋಟ, ಹೊಲಗದ್ದೆಗಳಲ್ಲಿ ಟೇಪ್ ರೆಕಾರ್ಡರ್‌ನಲ್ಲಿ ಸಂಗೀತವನ್ನು ಹಾಡಿಸಿ ಹೆಚ್ಚು ಬೆಳೆಯನ್ನೂ ಪಡೆದಿದ್ದಾರಂತೆ. ಹಾಗಾಗಿ ಸಂಗೀತ ಮನುಷ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ತಿಳಿಸಿದರು.
ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಸಂಗೀತಕ್ಕೆ ದೊಡ್ಡ ಶಕ್ತಿ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಲ್ಲಿ ಸಂಗೀತ ಪ್ರಿಯತೆಯನ್ನು ರೂಢಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಗಾಯಕ ಹಾಗೂ ಸಾಹಿತಿ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಮಾತನಾಡಿ, ಆಡದೇ ಮಾಡಿದವರು ರೂಢಿಯೊಳಗುತ್ತಮರು ಎನ್ನುವಂತೆ ಪೂರ್ವಿ ಗಾನಯಾನ ೧೦೦ರ ಸಂಭ್ರಮಾಚರಣೆಗೆ ಕಾರಣರಾದ ಎಂ.ಎಸ್.ಸುಧೀರ್ ಆಡದೆ ಮಾಡಿದ ಸಾಧನೆ. ಇನ್ನು ಅತ್ಯುತ್ತಮ, ಸರ್ವಶ್ರೇಷ್ಠ ಸಾಧನೆ ಅವರಿಂದಾಗಲಿ ಎಂದರು.
ಸಮಾರೋಪ ಭಾಷಣ ಮಾಡಿದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಡಾ.ಸಿ.ಕೆ.ಸುಬ್ಬರಾಯ, ಗಾಯಕ ಎಂ.ಎಸ್.ಸುಧೀರ್ ಅವರು ಪೂರ್ವಿತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ವಿಶೇಷ. ಈ ತಂಡ ಇನ್ನೂ ಹೆಚ್ಚು ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸಿದರು.
ಯೂನಿವರ್ಸಲ್ ಕಾಫಿ ಫೌಂಡೇಶನ್‌ನ ಟ್ರಸ್ಟಿ ಎ.ಬಿ.ಸುದರ್ಶನ್ ಮಾತನಾಡಿ, ಉಡುಪಿಯಲ್ಲಿ ಕನಕದಾಸರು ಹಾಡುತ್ತಿದ್ದರೆ ಶ್ರೀಕೃಷ್ಣ ಹಿಂದೆ ತಿರುಗಿದ್ದಾನೆ. ಇದನ್ನು ಗಮನಿಸಿದರೆ ಸಂಗೀತ ಎಷ್ಟು ಪರಿಣಾಮಕಾರಿ ಎನ್ನುವುದು ಗೊತ್ತಾಗುತ್ತದೆ. ಸಂಗೀತ ಸದಾ ಮನುಷ್ಯ ಜೀವನದ ಒಂದು ಭಾಗ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಮಾತುಗಳು ಕೇವಲ ನೀರಿನ ಮೇಲಿನ ಗುಳ್ಳೆಗಳಂತೆ. ಕೃತಿಗಳು ಚಿನ್ನದ ತುಣುಕುಗಳಿದ್ದಂತೆ ಎನ್ನುವ ನಾಣ್ಣುಡಿ ಉಲ್ಲೇಖಿಸಿ, ನಾವು ಮಾಡುವ ಕೆಲಸಗಳು ಕೃತಿಗಳಂತೆಯೇ ಆಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್, ಗಾಯಕರಾದ ರಾಯನಾಯಕ್, ಸುಮಾಪ್ರಸಾದ್, ರೂಪಾ ನಾಯ್ಕ, ಪ್ರಮುಖರಾದ ವೀಣಾ ಅರವಿಂದ್ ಉಪಸ್ಥಿತರಿದ್ದರು.