

ಮಹಾಲಿಂಗಪುರ: ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಸಂಗೀತ ಸಕಾರಾತ್ಮಕ ಪ್ರಭಾವ ಬೀರಿ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ಸಂತೋಷ ನೀಡುವ ದಿವ್ಯ ಔಷಧವಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಶ್ರೀ ನೀಲಕಂಠೇಶ್ವರ ಮಠದಲ್ಲಿ ಗುರುವಾರ ರಾತ್ರಿ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯವರು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೃತ್ಯ, ಹಾಡುಗಾರಿಕೆ ಸಂಗೀತ ಸಂಭಾಷಣೆ ಹಾಗೂ ವರ್ಣರಂಜಿತ ವೇಷ ಭೂಷಣಗಳಿಂದ ಯಕ್ಷಗಾನ ನೋಡುಗರ ಮನಸೆಳೆಯುತ್ತದೆ. ಅದು ಭಾರತದ ಸನಾತನ ಸಾಂಸ್ಕೃತಿಕ ಕುರುಹು ಎಂದರು.
ಸಸಿರಿ-ಸಿಂಗಾರಿ ಎಂಬ ಸಾಮಾಜಿಕ ಪ್ರಸಂಗ ಪ್ರದರ್ಶನದ ವೇಳೆ ಮಾತನಾಡಿದ ಕಲಾವಿದ ರಮೇಶ ಭಂಡಾರಿ, ಪ್ರೇಕ್ಷಕರ ಮನಸನ್ನು ಸಂತೋಷಗೊಳಿಸುವುದು ಈಶ್ವರನ ಪೂಜೆಗೆ ಸಮ. ಅವರು ಖುಷಿಯಿಂದ ನೀಡುವ ಶಿಳ್ಳೆ- ಚಪ್ಪಾಳೆಯೆ ನಮಗೆ ಹಬ್ಬದ ಉಡುಗೊರೆ. ಅವರನ್ನು ಸಂತೋಷಗೊಳಿಸಿ ಅದರಲ್ಲಿ ಸಂತೋಷ ಕಾಣುವವನೆ ಕಲಾವಿದ ಎಂದರು.
ಉಡುಪಿ ಭಾಗದ ಹೋಟೆಲ್ ಉದ್ಯಮಿಗಳು ಆಸಕ್ತಿಯಿಂದ ಈ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಪುರಸಭೆ ಸದಸ್ಯ ಶೇಖರ ಅಂಗಡಿ, ಗಣ್ಯರಾದ ಮಹಾದೇವ ಮಾರಾಪುರ, ಶಂಕರಗೌಡ ಪಾಟೀಲ, ಪ್ರಕಾಶ ಮಮದಾಪುರ, ಮಲ್ಲಪ್ಪ ಭಾವಿಕಟ್ಟಿ, ಮಹಾದೇವ ಬರಗಿ, ರವಿ ಮುಂಡಗನೂರ, ಮಹೇಶ ಜಿಡ್ಡಿಮನಿ, ಆನಂದ ಹಟ್ಟಿ, ಮಹೇಶ ಮನ್ನಯ್ಯನವರಮಠ, ಡಾ.ಶಿವಾನಂದ ನುಚ್ಚಿ, ವಿವೇಕ ಢಪಳಾಪುರ ಅತಿಥಿಗಳಾಗಿ ಆಗಮಿಸಿದ್ದರು.
ಉದ್ಯಮಿಗಳಾದ ಸುರೇಶ ಶೆಟ್ಟಿ, ಜಯರಾಮ ಶೆಟ್ಟಿ, ಸಂತೋಷ ಕುಮಾರ ದೇವಾಡಿಗ, ಸುರೇಶ ದೇವಾಡಿಗ, ರಾಜೇಶ ಶೆಟ್ಟಿ, ರಮೇಶ ಪೂಜಾರಿ, ಗುಂಡು ದೇವಾಡಿಗ ಯಕ್ಷಗಾನ ಮೇಳದ ನಿರ್ದೇಶಕ ರವಿರಾಜ ಶೆಟ್ಟಿ, ವ್ಯವಸ್ಥಾಪಕ ರಂಜಿತ ಶೆಟ್ಟಿ, ರಾಜೇಶ ಮಲ್ಲಾ, ಸುಬ್ರಹಮಣ್ಯ ಹೆಗಡೆ, ನರಸಿಂಹ ಗಾಂವಕರ, ಶಿಥಿಲ ಶೆಟ್ಟಿ, ತಿಲಕ ರಾಜ, ನಾಗಶ್ರೀ ಜಿ.ಎಸ್., ಮಾರುತಿ ನಾಯ್ಕ, ಶ್ರೀಕಾಂತ ರಟ್ಟೌಡಿ ಮುಂತಾದವರು ಇದ್ದರು.