ಒತ್ತಡದಿಂದ ಮುಕ್ತರಾಗಲು ಸಂಗೀತ ಸಹಕಾರಿ

5 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಸಂಗೀತದ ನೆಲ. ದೇಶದಲ್ಲೇ ಇದಕ್ಕೊಂದು ಮಹತ್ವದ ಸ್ಥಾನವಿದೆ. ಬಹಳ ಶ್ರೀಮಂತ ಸಂಸ್ಕೃತಿ ಹೊಂದಿದ ನಗರ. ನಿತ್ಯದ ಒತ್ತಡದಿಂದ ಹೊರಬರಲು ಸಂಗೀತ ಸಹಕಾರಿಯಾಗಿದೆ ಎಂದು ಸ್ತ್ರೀ ರೋಗ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.

ತಬಲಾ ವಾದಕ ಪಂ. ಶಂಕ್ರಪ್ಪ ಭೀಮಾಬಾಯಿ ಹೂಗಾರ ಸಂಗೀತ ಸಂಸ್ಥೆ ವತಿಯಿಂದ ನಗರದ ಆಲೂರು ವೆಂಕಟರವಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಬಲಾ ವಾದಕ ಪಂ. ಶಂಕ್ರಪ್ಪ ಮತ್ತು ಭೀಮಾಬಾಯಿ ಹೂಗಾರ ಪುಣ್ಯಸ್ಮರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಿತಾರರತ್ನ ರಹಿಮತ್​ಖಾನ, ಪಂ.ಪಂಚಾರಿ ಗವಾಯಿ, ಡಾ.ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್​ ಸೇರಿ ಅನೇಕ ದಿಗ್ಗಜರು ಈ ನೆಲಕ್ಕೆ ಘನತೆ ತಂದಿದ್ದಾರೆ. ಯುವ ಪೀಳಿಗೆ ಸಂಗೀತದತ್ತ ಒಲವು ತೋರುತ್ತಿರುವುದು ಧನಾತ್ಮಕ ಬೆಳವಣಿಗೆಯಾಗಿದೆ. ಈ ಪರಂಪರೆ ಉಳಿಸಿ ಬೆಳೆಸಲು ನಿರಂತರ ಕಾರ್ಯಕ್ರಮಗಳಾಗಬೇಕು ಎಂದರು.

ವೀರಣ್ಣ ಪತ್ತಾರ ಮಾತನಾಡಿ, ಭಾರತೀಯ ಸಂಗೀತ ಪರಂಪರೆಯಲ್ಲಿ ಅನೇಕ ಸಾಧಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರಲ್ಲಿ ಶಂಕ್ರಪ್ಪ ಹೂಗಾರ ಕೊಡುಗೆ ಅಪಾರ. ಇಂತಹ ಸಾಧಕರನ್ನು ಸ್ಮರಿಸಿ ಗೌರವಿಸಬೇಕಿದೆ. ಮಕ್ಕಳಿಗೆ ಸಂಗೀತಗಾರರ ಇತಿಹಾಸ ತಿಳಿಸುವ ಕೆಲಸವಾಗಲಿ ಎಂದರು.

ಪಂ. ಸಿದ್ದಣ್ಣ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಪಾಂಡುರಂಗ ಶ್ರೀನಿವಾಸ ಕಾವಿ ಅವರಿಗೆ ಸನ್ಮಾನಿಸಲಾಯಿತು. ಡಾ. ಉದಯಕುಮಾರ ದೇಸಾಯಿ, ರಾವೇಂದ್ರ ಆಯಿ, ಪಂ. ಬಿ.ಎಸ್​.ಮಠ, ಪಂ.ಶ್ರೀಪಾದ ಹೆಗಡೆ, ಉಸ್ತಾದ್​ ಛೋಟೆ ರಹಿಮತ್​ಖಾನ್​, ಪಂ.ರಘುನಾಥ ನಾಕೋಡ, ಪಂ.ವಾದಿರಾಜ ನಿಂಬರಗಿ, ಡಾ.ಮಲ್ಲಿಕಾರ್ಜುನ ತರ್ಲಘಟ್ಟಿ, ಉಸ್ತಾದ್​ ಶಫಿಕ್​ಖಾನ್​, ಮಲ್ಲಿಕಾರ್ಜುನ ಚಿಕ್ಕಮಠ, ಭಾರತಿದೇವಿ ರಾಜಗುರು, ಇತರರು ಇದ್ದರು.

ನಂತರ ಸೋಲಾಪುರದ ಪಂ. ಭೀಮಣ್ಣ ಜಾಧವ ಸುಂದರಿ ವಾದನದಲ್ಲಿ ರಾಗ ಹಂಸಧ್ವನಿ ಪ್ರಸ್ತುತ ಪಡಿಸಿದರು. ಸಹ ವಾದನದಲ್ಲಿ ಗುರುನಾಥ ಜಾಧವ, ಗೋರಖನಾಥ ಜಾಧವ, ಮಯೂರೇಶ ಜಾಧವ, ವೆಂಕಟೇಶಕುಮಾರ ಜಾಧವ ಸಾಥ್​ ನೀಡಿದರು. ಡಾ. ಮೋಹಸಿನ್​ ಖಾನ್​ ಸಿತಾರವಾದನ, ಸದಾಶಿವ ಐಹೊಳೆ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ರುನಂದನ ಗೋಪಾಲ ಹಾಗೂ ಸಂವಾದಿನಿಯಲ್ಲಿ ವಿನೋದ ಪಾಟೀಲ ಸಾಥ್​ ನೀಡಿದರು.

ಮಳೆಮಲ್ಲೇಶ ಹೂಗಾರ ಸ್ವಾಗತಿಸಿದರು. ಮಾಯಾ ರಾಮನ್​ ನಿರೂಪಿಸಿದರು. ಉಮೇಶ ಮುನವಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net