

ಮೈಸೂರು: ಸಂಗೀತವು ಜನರನ್ನು ಒಂದುಗೂಡಿಸುವ ಸಾಮರ್ಥ್ಯ ಹೊಂದಿದೆ ಎಂದು ಸಂಗೀತ ಕಲಾವಿದ ಸುಮಂತ್ ಮಂಜುನಾಥ್ ತಿಳಿಸಿದರು.
ವಿಜಯವಿಠಲ ವಿದ್ಯಾಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತ ನಮ್ಮ ಹೃದಯಗಳನ್ನು ಮಾತನಾಡಿಸುತ್ತದೆ, ಭಾವನೆ ಪ್ರಚೋದಿಸುತ್ತದೆ, ನೆನಪುಗಳನ್ನು ಹುಟ್ಟು ಹಾಕುತ್ತದೆ. ಕಷ್ಟದ ಸಮಯದಲ್ಲಿ ಇದು ಸಾಂತ್ವನದ ಮೂಲವಾಗಿದೆ. ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಸಂಗೀತವು ಹಲವಾರು ಪ್ರಯೋಜನ ಹೊಂದಿದೆ ಎಂದರು.
ಭಾರತೀಯ ಶಾಸ್ತ್ರೀಯ ಸಂಗೀತವು ನೃತ್ಯ ಮಾಡಲು, ಒತ್ತಡ ಕಡಿಮೆ ಮಾಡಲು, ಮನಸ್ಥಿತಿ ಸುಧಾರಿಸಲು, ಕಾರ್ಯಕ್ಷಮತೆ ಸುಧಾರಿಸುತ್ತದೆ. ಜತೆಗೆ, ಕಾಯಿಲೆ ಗುಣಪಡಿಸಲು ಮತ್ತು ದುಃಖ ಕಡಿಮೆ ಮಾಡುವ ಶಕ್ತಿಯನ್ನು ಇದು ಹೊಂದಿದೆ. ಸಂಗೀತವನ್ನು ಸಾಮಾನ್ಯವಾಗಿ ಸಾರ್ವತ್ರಿಕ ಭಾಷೆ. ಸಂಗೀತ ಕಲಿಯುವ ಮಕ್ಕಳು ಶೈಕ್ಷಣಿಕ ಸಾಧನೆಯಲ್ಲೂ ಮೇಲುಗೈ ಸಾಧಿಸುತ್ತಾರೆ ಎಂದು ತಿಳಿಸಿದರು.
ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತವು ಸ್ವಅಭಿವ್ಯಕ್ತಿ ಮತ್ತು ಸೃಜನಶೀಲತೆಗೆ ಅವಕಾಶ ನೀಡುವ ಒಂದು ಕಲಾ ಪ್ರಕಾರವಾಗಿದೆ. ಸಂಗೀತವು ಅಂತರಂಗದ ಭಾವನೆಗಳೊಂದಿಗೆ ಮತ್ತು ಪರಸ್ಪರ ಸಂಪರ್ಕಿಸಲು ಒಂದು ಮಾರ್ಗ ನೀಡುತ್ತದೆ ಎಂದು ಹೇಳಿದರು. ಶಾಲೆಯ ಪ್ರಾಂಶುಪಾಲೆ ವೀಣಾ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.