ಸಂಗೀತಕ್ಕಿದೆ ಮನಸ್ಸನ್ನು ವ್ಯವಸ್ಥಿತವಾಗಿ ಕಟ್ಟುವ ಶಕ್ತಿ

14sgr1
ಸಾಗರದಲ್ಲಿ ವೇದನಾದ ಪ್ರತಿಷ್ಠಾನ ಆಯೋಜಿಸಿರುವ ರಾಷ್ಟ್ರೀಯ ಸಂಗೀತೋತ್ಸವವನ್ನು ಉದ್ಯಮಿ ಮಧುಕರ ನರಸಿಂಹ ಹೆಗಡೆ ಉದ್ಘಾಟಿಸಿದರು ಎಸ್.ಕೆ.ವೆಂಕಟೇಶ್, ವಸುಧಾ ಶರ್ಮ, ಮಾಧವ ಭಟ್ ಇತರರಿದ್ದರು.
Published on

ಸಾಗರ: ಸಂಗೀತ, ನೃತ್ಯದಂತಹ ಪ್ರಾಕಾರಗಳು ಮಾನಸಿಕ ನೆಮ್ಮದಿ ನೀಡುತ್ತದೆ. ತಾಯಿಯ ಜೋಗುಳದ ಹಾಡು ಮಕ್ಕಳಿಗೆ ನೆಮ್ಮದಿಯ ನಿದ್ದೆ ತರುತ್ತಿತ್ತು. ಸಂಗೀತಕ್ಕೆ ಅಂತಹ ಶಕ್ತಿ ಇದೆ. ಮನಸ್ಸನ್ನು ವ್ಯವಸ್ಥಿತವಾಗಿ ಕಟ್ಟುವ ಸಂಗೀತದ ಅಭ್ಯಾಸದಲ್ಲಿ ಯುವಜನರು ತೊಡಗಿಸಿಕೊಳ್ಳಬೇಕು ಎಂದು ಉದ್ಯಮಿ ಮಧುಕರ ನರಸಿಂಹ ಹೆಗಡೆ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ 24ನೇ ವರ್ಷದ ರಾಷ್ಟ್ರೀಯ ಸಂಗೀತೋತ್ಸವವನ್ನು ವೀಣೆ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಅತ್ಯಂತ ವಿಶಿಷ್ಟ ಕಲೆಯಾಗಿದೆ. ಎಂತಹ ನೋವಿನಲ್ಲಿದ್ದರೂ ಸಂಗೀತವನ್ನು ಆಸ್ವಾದನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಜೀವಜಗತ್ತಿನಲ್ಲಿ ಮನುಷ್ಯನಿಗೆ ಮಾತ್ರ ಇಂತಹ ವಿಶೇಷವಾದ ಶಕ್ತಿ ದೇವರು ಕಲ್ಪಿಸಿ ಕೊಟ್ಟಿದ್ದಾನೆ. ಕಳೆದ 24 ವರ್ಷಗಳಿಂದ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಸಣ್ಣ ಕೆಲಸವಲ್ಲ. ರಾಜ್ಯ ಹಾಗೂ ವಿವಿಧ ರಾಜ್ಯಗಳಿಂದ ಕಲಾವಿದರನ್ನು ಇಲ್ಲಿಗೆ ಕರೆಸಿ ಅವರ ಕಲೆಯನ್ನು ನಮ್ಮೂರಿನ ಜನರು ಆಸ್ವಾದಿಸುವಂತೆ ಮಾಡುವ ಕೆಲಸವನ್ನು ವಿದುಷಿ ವಸುಧಾ ಶರ್ಮ ಮತ್ತವರ ತಂಡ ಮಾಡುತ್ತಿದೆ. ಇಂತಹ ಸಂಗೀತೋತ್ಸವಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು
ಪಂಡಿತ್ ಮೋಹನ್ ಹೆಗಡೆ ಹುಣಸೆಕೊಪ್ಪ ಮಾತನಾಡಿ, ಸಂಗೀತೋತ್ಸವದ 23 ಬಾಗಿಲು ತೆರೆದಿತ್ತು. ಇಂದು 24ನೇ ಬಾಗಿಲು ತೆರೆದಿದೆ. ಮುಂದಿನ ವರ್ಷ ಬೆಳ್ಳಿಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಂಸ್ಥೆ ಅಗತ್ಯ ಸಿದ್ಧತೆ ಈಗಿನಿಂದಲೇ ನಡೆಸಿಕೊಂಡು ಬರುತ್ತಿದೆ. ರಾಷ್ಟ್ರೀಯ ಸಂಗೀತೋತ್ಸವ ನಡೆಸುವುದು ಸುಲಭವಲ್ಲ. ಆದರೆ ವಿದುಷಿ ವಸುಧಾ ಶರ್ಮ ಹೆಸರಾಂತ ಗಾಯಕಿಯಾಗಿ, ಕಾರ್ಯಕ್ರಮ ಸಂಘಟಕರಾಗಿ ಇಂತಹ ದೊಡ್ಡಮಟ್ಟದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ವೇದನಾದ ಪ್ರತಿಷ್ಠಾನದ ಅಧ್ಯಕ್ಷ ಎಚ್.ಕೆ.ವೆಂಕಟೇಶ್ ಹುಲಿಮನೆ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ವಸುಧಾ ಶರ್ಮ, ವಿದ್ವಾನ್ ನರಸಿಂಹಮೂರ್ತಿ ಹಳೇ ಇಕ್ಕೇರಿ, ಮಾಧವ ಭಟ್ ಇದ್ದರು. ಶಿರಸಿಯ ಸ್ಮಿತಾ ಹೆಗಡೆ ಅವರಿಂದ ಹಿಂದುಸ್ತಾನಿ ಗಾಯನ, ಹಿನ್ನೆಲೆ ಗಾಯಕಿ ವಿದುಷಿ ಎಚ್.ಜಿ.ಚೈತ್ರಾ ಅವರಿಂದ ಭಕ್ತಿ ಸಂಗೀತ, ಉಸ್ತಾದ್ ಶಫೀಕ್ ಖಾನ್ ಧಾರವಾಡ ಮತ್ತು ಶೌರಿ ಶಾನಭೋಗ್ ಬೆಂಗಳೂರು ಅವರಿಂದ ಹಿಂದುಸ್ತಾನಿ ಸಿತಾರ್ ವಾದನ ನಡೆಯಿತು. ವೇದನಾದ ಪ್ರತಿಷ್ಠಾನದ ಮಕ್ಕಳಿಂದ ನಡೆದ ಸಂಗೀತ ಕಾರ್ಯಕ್ರಮ ಜನ ಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net